ಮೈಸೂರು: ರಾಜ್ಯ ಸರ್ಕಾರ 2024 ರಲ್ಲಿ ಮಂಡಿಸುವ ಬಜೆಟ್ ಗೆ ರಾಜ್ಯದ ರೈತರ ಒತ್ತಾಯಗಳ ಬಗೆ ಗಮನ ಸೆಳೆಯಲು ಕಬ್ಬು ಬೆಳೆಗಾರ ರೈತರು ಹಾಗೂ ಗ್ರೀನ್ ಬರ್ಡ್ಸ್ ಮಹಿಳೆಯರಿಂದ ಫೆ. 6 ರಂದು ಬೆಂಗಳೂರು ಚಲೋ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘ, ರಾಜ್ಯ ರೈತ ಸಂಘಟನೆಗಳು ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು
ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರವೇ ರೈತರ ಸಾಲ ಮನ್ನ ಮಾಡಿದೆ ಅದೇ ರೀತಿ ರಾಜ್ಯದಲ್ಲಿಯು ಸಾಲ ಮನ್ನಾ ಆಗಬೇಕು. ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಈಗಾಗಲೇ ಕಬ್ಬು ಕಟಾವು ಸಾಗಣಿಕೆ ದರ ಸಕ್ಕರೆ ಕಾರ್ಖಾನೆಗಳು ಮನಬಂದಂತೆ ಕಡಿತ ಮಾಡಿರುವ ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಲಾಗುವುದು.
2022- 23ರ ಸಾಲಿನಲ್ಲಿ ಕಬ್ಬಿಗೆ ಟನ್ ಗೆ 150 ಹೆಚ್ಚುವರಿ ದರ ಕೂಡಲೇ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಕ್ರಮ ಕೈಗೊಳ್ಳಬೇಕು, ಇಲ್ಲವೇ ಸರ್ಕಾರವೇ ರೈತರಿಗೆ ಪಾವತಿಸಬೇಕು ಎಂದರು.
ತೆಲಂಗಾಣ ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರವೇ ವಿಮಾ ಕಂತು ಪಾವತಿಸಿ 5 ಲಕ್ಷ ಜೀವ ವಿಮೆ ಪಾಲಿಸಿ ನೀಡಲಾಗಿದೆ ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ ಐದು ಲಕ್ಷ ರೂ ಪರಿಹಾರ ಸಿಗುತ್ತದೆ ಇದೇ ರೀತಿ ಕರ್ನಾಟಕ ರಾಜ್ಯದಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ರೈತರ ಎಲ್ಲ ಕೃಷಿ ಉತ್ಪನ್ನಗಳನ್ನ ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿ ಪಂಜಾಬ್ , ಹರಿಯಾಣ,ತೆಲಂಗಾಣ, ತಮಿಳುನಾಡು ಮಾದರಿಯಲ್ಲಿ ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂ ಎಸ್ ಪಿ ಖರೀದಿ ಕೇಂದ್ರ ತೆರೆದು, ರೈತರಿಂದ ಖರೀದಿಸುವ ಮಿತಿಯನ್ನ ರದ್ದುಗೊಳಿಸಿ ,ಮೇಲಿನ ರಾಜ್ಯಗಳಲ್ಲಿ ಇರುವಂತೆ ಜಾರಿ ಮಾಡಬೇಕು ಎಂದರು.
ಬರಗಾಲ ಪೀಡಿತ ಪ್ರದೇಶದ ರೈತರಿಗೆ, ತಮಿಳುನಾಡಿಗೆ ನೀರು ಹರಿಸಿ ಕಾವೇರಿ ಆಚ್ಚುಕಟ್ಟು ರೈತರಿಗೆ ವಂಚನೆ ಮಾಡಿರುವ ಸರ್ಕಾರ ರೈತರಿಗೆ ಕೂಡಲೇ ಎಕರೆಗೆ 25,000 ಪರಿಹಾರ ನೀಡಬೇಕು. ರೈತರು ಬೆಳೆದ ಎಲ್ಲಾ ಪೌಷ್ಟಿಕ ಸಿರಿಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ ಹೆಚ್ಚುವರಿ ಬೆಲೆ ನಿಗದಿ ಮಾಡಿ ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂಥ ವ್ಯವಸ್ಥೆ ಜಾರಿಗೆ ಬರಬೇಕು, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಖರೀದಿಸಿ, ಸರ್ಕಾರದ ಅಂಗಸಂಸ್ಥೆಗಳಾದ ಆಸ್ಪತ್ರೆ ವಿದ್ಯಾರ್ಥಿ ನಿಲಯ, ಜೈಲುಗಳಿಗೆ, ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು.
ರೈತರ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು, ಬೆಳೆವಿಮೆ ಪದ್ದತಿ ಕೆಲವು ನೀತಿಗಳು ಬದಲಾಗಬೇಕು. ಅತಿವೃಷ್ಟಿ ಪ್ರಕೃತಿ ವಿಕೋಪ ಬೆಳೆನಷ್ಟಕ್ಕೆ ಪರಿಹಾರ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು. ಕೃಷಿ ಸಾಲ ನೀತಿ ಬದಲಾಗಬೇಕು, ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು ಎಲ್ಲಾ ರೈತರಿಗೂ ಕೇವಲ ಪಹಣಿ ಪತ್ರ ಆಧರಿಸಿ ಕನಿಷ್ಠ 5ಲಕ್ಷ ಆಧಾರರಹಿತ ಬಡ್ಡಿಇಲ್ಲದ ಸಾಲ ಕೊಡಿಸುವ ಯೋಜನೆ ಎಲ್ಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜಾರಿಯಾಗಬೇಕು ಎಂದರು.
ಸಕ್ಕರೆ ಕಾರ್ಖಾನೆಗಳು ಸಕ್ಕರೆ ಇಳುವರಿ ತೋರಿಸುವ ಮಾನದಂಡ ಬದಲಾಗಬೇಕು ಇಳುವರಿ ಮೋಸ ತಪ್ಪಿಸಲು ವೈಜ್ಞಾನಿಕ ಮಾನದಂಡ ಅಳವಡಿಸಬೇಕು. ಕಬ್ಬಿನ ಎಥನಾಲ್ ಉತ್ಪಾದನಾ ಲಾಭದ ಆದಾಯವನ್ನು ಕಬ್ಬು ದರ ನಿಗದಿಯಲ್ಲಿ ಪರಿಗಣಿಸಬೇಕು. ಕಬ್ಬಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ,ಬೆಂಕಿ ಅನಾಹುತವಾದಾಗ ಸುಟ್ಟು ಹೋದ ಕಬ್ಬಿಗೆ ಯಾವುದೇ ಮಾನದಂಡವಿಲ್ಲದೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇಕಡ 25ರಷ್ಟು ಕಡಿತ ಮಾಡುವುದನ್ನು ಕೈ ಬಿಟ್ಟು ಎಫ್ ಆರ್ ಪಿ ಹಣ ರೈತರಿಗೆ ಪೂರ್ತಿ ಪಾವತಿ ಆಗಬೇಕು. ಕೃಷಿಗೆ ಬಳಸುವ ಕೀಟನಾಶಕ ರಸಗೊಬ್ಬರ, ಹನಿ ನೀರಾವರಿ ಉಪಕರಣಗಳು ಟ್ಯಾಕ್ಟರ್ ಬಿಡಿಭಾಗಗಳ ಜಿ ಎಸ್ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು ಎಂದರು.
ರಾಜ್ಯ ಬಜೆಟ್ ಮಂಡನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಡಬೇಕು, ರೈತರ ಅಭಿವೃದ್ಧಿ ಪೂರ್ವಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಫೆಬ್ರವರಿ ಆರರಂದು ಬೆಂಗಳೂರ ಚಲೋ ನಡೆಸಿ ಒತ್ತಾಯ ಪತ್ರ ಸಲ್ಲಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಲಕ್ಷ್ಮಿಪುರ ವೆಂಕಟೇಶ್, ಕಮಲಮ್ಮ, ಅಂಬಳೆ ಮಂಜುನಾಥ್, ಮಹದೇವಸ್ವಾಮಿ, ಸುನಿಲ್ ಇದ್ದರು.