ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಹೆಣ್ಣುಮಕ್ಕಳಿಗೆ ಬೆಂಬಲ ಮತ್ತು ಅವಕಾಶಗಳನ್ನು ಒದಗಿಸುವ ಮೂಲಕ ಅವರನ್ನು ಬಲಿಷ್ಠರನ್ನಾಗಿ ಬೆಳೆಸೋಣ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ.ನಟರಾಜ್ ಹೇಳಿದರು.
ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ ಮತ್ತು ಮಗುವಿಗೆ ಹಣ್ಣುಹಂಪಲು ಹಾಗೂ ಸಿಹಿ ವಿತರಿಸಿ ಮಾತನಾಡಿದರು. ಹೆಣ್ಣುಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಅವರಲ್ಲಿ ಶಿಕ್ಷಣದ ಪ್ರಾಮುಖ್ಯತೆ, ಅವರ ಆರೋಗ್ಯ ಮತ್ತು ಪೋಷಣೆಯ ಬಗ್ಗೆ ಅರಿವು ಮೂಡಿಸಿ ಸಮಾಜದಲ್ಲಿ ಭಯಮುಕ್ತರಾಗಿ ಬೆಳೆಸಲು ಎಲ್ಲರೂ ಪಣತೊಡಬೇಕೆಂದರು.
ಮನೆಯಲ್ಲಿ ಹೆಣ್ಣೊಂದಿದ್ದರೆ ಶಾಲೆಯೊಂದು ತೆರೆದಂತೆ ಎಂಬಂತೆ ಪ್ರತಿ ಮನೆಯಲ್ಲಿ ಹಣ್ಣಿಗೆ ಮೊದಲಿನಿಂದಲೂ ಉತ್ತಮ ಸ್ಥಾನಮಾನವಿದ್ದು ಅವರಲ್ಲಿ ಮತ್ತಷ್ಟು ಜಾಗೃತಿ ಮೂಡಿಸಿ ಇದನ್ನು ಮತ್ತಷ್ಟು ಬಲಪಡಿಸಿ ಹೆಣ್ಣಮಕ್ಕಳನ್ನು ಬಲಶಾಲಿಯಾಗಿಸಿ ಸ್ವತಂತ್ರರಾಗಿ ಭಯಮುಕ್ತರಾಗಿ ಬೆಳೆಸೋಣ ಎಂದರು ಹೆಣ್ಣು ತಾಯಿಯಾಗಿ, ಪತ್ನಿಯಾಗಿ, ತಂಗಿ, ಅಕ್ಕ, ಅತ್ತೆ, ಸೊಸೆಯಾಗಿ ಹಲವು ಪಾತ್ರಗಳಲ್ಲಿ ಸಮಾಜಕ್ಕೆ ಶಕ್ತಿಯಾಗಿ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಎಲ್ಲಾ ರಂಗಗಳಲ್ಲಿ ದುಡಿಯುತ್ತಿದ್ದು ಇಂತಹ ಸ್ತ್ರೀಶಕ್ತಿಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸ ಎಲ್ಲರಿಂದ ಆಗಬೇಕಾಗಿದೆ ಎಂದರು.
ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ನವೀನ್, ನಗರ ಕಾಂಗ್ರೇಸ್ ಅಧ್ಯಕ್ಷ ಎಂ.ಜೆ.ರಮೇಶ್, ಕಾಂಗ್ರೇಸ್ ಮುಖಂಡ ಹೆಬ್ಬಾಳುಪಂಚೆನಾಗೇಂದ್ರ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಕೆ.ವಿ.ರಮೇಶ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರೇಖಾ, ಶುಶ್ರೂಷಣಾಧಿಕಾರಿ ಲೀಲಾವತಿ, ಕೆ.ವಿ.ರೇಖಾ, ಅನಿತಾ, ಎಂ.ಭಂಡಾರಿ, ನಾಗವೇಣಿ, ಸುಮಲತಾ ಅರೋಗ್ಯ ಸುರಕ್ಷಣಾಧಿಕಾರಿ ಬೇಬಿರೇಖಾ, ಸಿಬ್ಬಂದಿಗಳಾದ ಮಂಜೇಗೌಡ, ನವೀದ್, ಶಿವಾನಂದ, ರಾಜೇಶ್ವರಿ ಮತ್ತಿತರರು ಹಾಜರಿದ್ದರು.