ಮೈಸೂರು: ೧೧೯ನೇ ರಾಷ್ಟ್ರಕವಿ ಕುವೆಂಪು ಜನ್ಮ-ದಿನೋತ್ಸವ ಮತ್ತು ಚಿತ್ರ ಕಲಾ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆರ್ಟ್-ಆಲ್ಟರ್ನೇಟಿವ್ ಎಂಬ ಪ್ರತಿಷ್ಟಿತ ಚಿತ್ರ-ಕಲಾ ಸಂಸ್ಥೆ (ವಿ.ವಿ.ಮೊಹಲ್ಲಾ) ಯಲ್ಲಿ ಅತ್ಯಂತ ವಿಶಿಷ್ಟತೆಯಿಂದ ಯಶಸ್ವಿಯಾಗಿ ನಡೆಯಿತು.
ಈ ಸಮಾರಂಭವನ್ನು ರಾಷ್ಟ್ರಕವಿ ಕುವೆಂಪು ರವರ ಸುಪುತ್ರಿ, ಸಾಹಿತಿಗಳು ಮತ್ತು ಲೇಖಕರು ಡಾ.ತಾರಿಣಿ ಚಿದಾನಂದ್ ಉಧ್ಘಾಟಿಸಿದ್ದು, ಮುಖ್ಯ ಅತಿಥಿಗಳಾಗಿ, ಕುವೆಂಪು ವಿಶ್ವ ವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ. ಕೆ ಚಿದಾನಂದ ಗೌಡ ಹಾಗು ಮೈಸೂರು ಗ್ರಾಹಕರ ಪರಿಷತ್‌ನ ಸಂಸ್ಥಾಪಕ ಸಂಚಾಲಕರು ಡಾ. ಭಾಮೀ ವಿ. ಶೆಣೈ, ಮತ್ತು ಹಿರಿಯ ವಿಜ್ಞಾನಿ ಡಾ.ಜಿ.ಪಾಂಡುರಂಗ ಮೂರ್ತಿ ಕುವೆಂಪು ಕುರಿತು ವಿಶಿಷ್ಟ ಪ್ರವಚನ ನೀಡಲು ವಿಶೇಷ ಅತಿಥಿಗಳಾಗಿ ಸಮಾರಂಭದಲ್ಲಿದ್ದರು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಕುವೆಂಪುರವರ ಸುಪುತ್ರಿ ಡಾ.ತಾರಿಣಿ ಚಿದಾನಂದ್, ಕವಿ ಮತುತ್ತು ಕಲೆಯ ನಡುವಿನ ಭಾಂದವ್ಯ ಅಪರಿಮಿತವಾದದ್ದು; ಪರಿಸರವನ್ನು ನಂಬಿ ಬೆಳೆದರೆ ಮಾತ್ರವೇ ಮಾನವನ ಪಾರಂಪರಿಕ ನೆಲೆ ಸಾದ್ಯ ಎಂಬ ಕುವೆಂಪುರವರ ಸಾರ್ವಕಾಲಿಕ ಅಭಿಮತವನ್ನು ಎಂದು ನಿರ್ದಿಷ್ಟ ಉದಾಹರಣೆಯೊಂದಿಗೆ ವಿವರಿಸಿದರು.
ಜೊತೆಗೆ, ಬಾಲ್ಯದಲ್ಲಿ ತಾವು ತಂದೆಯ ವಿಚಾರ-ಧಾರೆಗಳಿಂದ ಪ್ರೇರೇಪಿತವಾದ ಸನ್ನಿವೇಷಗಳನ್ನು ಅತ್ಯಂತ ಪ್ರಖರವಾಗಿ ಹೇಳುತ್ತಾ.. ಮುಂದಿನ ಜನಾಂಗ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಬದುಕಿನಲ್ಲಿ ವ್ಯಕ್ತಿತ್ವದ ಪರಿವರ್ತನೆ ಹೊಂದಬಹುದು ಹಾಗು ಅದು ಜೀವನದ ಪರಿಪೂರ್ಣತೆಗೆ ಸಾದ್ಯವಾಗುತ್ತದೆ ಕೂಡ ಎಂದು ಕರೆಕೊಟ್ಟರು.
ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ಡಾ.ಜಿ.ಪಾಂಡುರಂಗ ಮೂರ್ತಿಯವರು ಕುವೆಂಪು ಜೀವನ ಚರಿತ್ರೆ: ಸಂಕ್ಷಿಪ್ತ ನೋಟದ ಕುರಿತು ಪ್ರವಚನ ನೀಡಿ ರಾಷ್ಟ್ರಕವಿ ಕುವೆಂಪು ವೈಚಾರಿಕತೆಯ ಬೀಜ ಬಿತ್ತಿ ವಿಶ್ವಮಾನವ ಸಂದೇಶ ಸಾರಿದ್ದಾರೆ ಎಂದು ಹೇಳಿದರು.
ಕುವೆಂಪು ಅವರು ಬರೆಯದ ಸಾಹಿತ್ಯದ ಪ್ರಾಕಾರವಿಲ್ಲ. ಕನ್ನಡ ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಡುವ ಮೂಲಕ ಕನ್ನಡವನ್ನು ಸಾಹಿತ್ಯ ಲೋಕದಲ್ಲಿ ಶ್ರೀಮಂತಗೊಳಿಸಿದರು.

ನಂತರದಲ್ಲಿ ವಿಶ್ರಾಂತ ಕುಲಪತಿಗಳಾದ ಡಾ. ಕೆ. ಚಿದಾನಂದ ಗೌಡರು ಮಾತನಾಡುತ್ತಾ ..ಕುವೆಂಪು ರವರ ವಿಶ್ವಮಾನವ ಸಂದೇಶ ಸಾರ್ವಕಾಲಿಕ ಮತ್ತು ಪ್ರಾಪಂಚಿಕವಾದದ್ದು; ಜೀವನದಲ್ಲಿ ಯಾವುದೇ ಸಾಧನೆ ಮಾಡಿದರೂ ಅದನ್ನು ಮಾನವ ಕಲ್ಯಾಣಕ್ಕೆ ವಿನಿಯೋಗಿಸುವ ಪ್ರಾಮಾಣಿಕತೆಯೇ ಮಾನವ-ವಿಶ್ವಮಾನವನಾಗುವ ಪ್ರಾಕಾರ ಎಂದು ವ್ಯಾಖ್ಯಾನ ನೀಡಿದರು.
ತದನಂತರ, ಮೈಸೂರು ಗ್ರಾಹಕರ ಪರಿಷತ್‌ನ ಸಂಸ್ಥಾಪಕ ಸಂಚಾಲಕರಾದ ಡಾ. ಭಾಮೀ ವಿ. ಶೆಣೈ ರವರು ತಮ್ಮಭಾಷಣದಲ್ಲಿ ಮಕ್ಕಳಿಗೆ ಮೊಬೈಲ್ ಕೊಡುವುದನ್ನು ನಿರ್ಬಂದಿಸಿ, ಅದರಲ್ಲೂ ವಿದ್ಯಾರ್ಥಿಗಳು ಮೊಬೈಲ್‌ಗೆ ದಾಸರಾಗಿ ಅದರಿಂದ ಸದುಪಯೋಗ ಪಡೆಯುವುದಕ್ಕಿಂತ, ಅಡ್ಡದಾರಿ ಹಿಡಿಯುವುದೇ ಹೆಚ್ಚಾಗಿದೆ, ಜೊತೆಗೆ ಅವರ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀರಿ ಮಾನಸೀಕ ಸ್ಥ್ತಿಮಿತ ಕಳೆದುಕೊಳ್ಳುವ ಸಾದ್ಯತೆಯಿರುತ್ತದೆ ಮುಂದೆ ಇದು ಸಮಾಜದ ಒಟ್ಟು ಪ್ರಗತಿಯ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೇ, ಕುವೆಂಪು ರವರ ಆದರ್ಶ ಮುಂದಿನ ಜನಾಂಗಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಈ ಸಮಾರಂಭದಲ್ಲಿ ಡಾ.ಜಿ.ಪಾಂಡುರಂಗ ಮೂರ್ತಿಯವರು ಕುವೆಂಪು ಜೀವನಗಾಥೆ ಕುರಿತು ಚಿತ್ರ-ಪ್ರದರ್ಶನದ ಮೂಲಕ ನೀಡಿದ ವಿಶೇಷ ಪ್ರವಚನ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಬಣ್ಣಿಸಿದರು.
ವಿಶ್ವಮಾನವ ಕುವೆಂಪು ಲಯನ್ಸ್ ಮೈಸೂರು ಸಂಸ್ಥೆಯ ಕರ‍್ಯದರ್ಶಿಗಳಾದ ಡಿ.ವಿ.ದಯಾನಂದ ಸಾಗರ್ ರವರು ಸಮಾರಂಭದ ಅದ್ಯಕ್ಷತೆ ವಹಿಸಿದ್ದು, ತಮ್ಮ ಭಾಷಣದಲ್ಲಿ, ಕುವೆಂಪು ರವರ ಬದುಕು ಮತ್ತು ಅವರ ಕೊಡುಗೆಗಳು ಮುಂದಿನ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ನಾವು ನಿರಂತರ ಸಾಗಬೇಕಾಗಿದೆ ಹಾಗು ಇದು ನಮ್ಮ ಕರ್ತವ್ಯ ಕೂಡ ಎಂದು ಹೇಳಿ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿದರು.
ಸಮಾರಂಭವನ್ನು ಸಹ-ಆಯೋಜನೆ ಮಾಡಿದ್ದ ಆರ್ಟ್-ಆಲ್ರ‍್ನೇಟಿವ್ ಎಂಬ ಚಿತ್ರ-ಕಲಾ ಸಂಸ್ಥೆಯ ಕಲಾವಿದರು ಮತ್ತು ಮುಖ್ಯ ತರಬೇತುದಾರರಾದ ಅಜ್ಮಿ ಮೊಹಮ್ಮದ್ ಖಾನ್ ತಮ್ಮ ಸಂಸ್ಥೆಯು ಕಳೆದ ೧೫ ವರ್ಷದಿಂದ ಚಿತ್ರ-ಕಲೆಯ ಹಲವು ಮಜಲುಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಬಾಗವಹಿಸಿ ಕೀರ್ತಿ ತಂದಿರುತ್ತಾರೆ. ರಾಷ್ಟ್ರಕವಿ ಕುವೆಂಪು ರವರ ವಿಶ್ವಮಾನವ ಸಂದೇಶವೇ ನಮಗೆಲ್ಲರಿಗೂ ಮಾದರಿ ಎಂದು ಹೇಳಿ ಕಾರ್ಯಕ್ರಮದ ವಂದನಾರ್ಪಣೆಯನ್ನು ನಡೆಸಿದರು.
ಕು.ರಕ್ಷಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸದರಿ ಕಾರ್ಯಕ್ರಮದಲ್ಲಿ, ಚಿತ್ರ ಕಲಾ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ಥಿ ಪತ್ರ ಹಾಗು ಸ್ಮರಣಿಕೆಗಳನ್ನು ನೀಡಿ ಉತ್ತೇಜಿಸಲಾಯಿತು ಹಾಗು ಎನ್.ಸಿ.ಸಿ-೨೦೨೩ ರ ರಾಷ್ಟ್ರೀಯ ಯುವ ಸೇನಾಧಳದ ರಕ್ಷಾ ಮಂತ್ರಿ ಪದಕ ವಿಜೇತೆ ಕು.ಎಂ. ಕಲ್ಪನಾ ಕುಟ್ಟಪ್ಪ ಸಾಧಕಿಗೆ ಮುಖ್ಯ ಅತಿಥಿಗಳು ಸ್ಮರಣಿಕೆ ನೀಡಿ ಗೌರವಿಸಿದರು.