Sunday, April 20, 2025
Google search engine

Homeರಾಜಕೀಯಮಂಡ್ಯದಲ್ಲಿ ಬಿಜೆಪಿ ಕೋಮು ರಾಜಕಾರಣದ ಪ್ರಯೋಗ ಶಾಲೆ ಆರಂಭಿಸಿದೆ: ಪ್ರಿಯಾಂಕ್ ಖರ್ಗೆ

ಮಂಡ್ಯದಲ್ಲಿ ಬಿಜೆಪಿ ಕೋಮು ರಾಜಕಾರಣದ ಪ್ರಯೋಗ ಶಾಲೆ ಆರಂಭಿಸಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಇಷ್ಟು ದಿನ ಕರಾವಳಿಯನ್ನು ಕೋಮು ರಾಜಕಾರಣದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಸಂಘ ಪರಿವಾರ ಈಗ ಮಂಡ್ಯದಲ್ಲಿ ತಮ್ಮ ಪ್ರಯೋಗ ಶಾಲೆ ಆರಂಭಿಸಿದೆ ಎಂದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದಾರೆ.

ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮ ಪಂಚಾಯ್ತಿಯಲ್ಲಿ ವಿವಾದ ಸೃಷ್ಠಿಸಿ ಕೋಮು ಸೌಹಾರ್ದ ಕೆಡಿಸಲು ಬಿಜೆಪಿ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಿಯಾಂಕ್ ಪೋಸ್ಟ್ ಮಾಡಿದ್ದಾರೆ. `ಸಮಾಜ ಶಾಂತಿಯುತವಾಗಿದ್ದರೆ ಬಿಜೆಪಿಗೆ ತಿಂದ ಅನ್ನ ಜೀರ್ಣವಾಗುವುದಿಲ್ಲ ಎನಿಸುತ್ತದೆ. ಮಂಡ್ಯದಲ್ಲಿ ಬೆಂಕಿ ಹತ್ತಿಸಿ ಆ ಬೆಂಕಿಯಲ್ಲಿ ರಾಜಕೀಯದ ಚಳಿ ಕಾಯಿಸಿಕೊಳ್ಳುತ್ತಿರುವ ಬಿಜೆಪಿ ನಾಯಕರು ಅತ್ಯಂತ ಕೀಳು ಮಟ್ಟಕ್ಕೆ ಇಳಿದಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ವಿರೋಧ ಪಕ್ಷದ ನಾಯಕನೆಂದರೆ ಘನತೆಯುಕ್ತ ಸ್ಥಾನ, ಆ ಸ್ಥಾನದ ಗೌರವವನ್ನು ಮಣ್ಣುಪಾಲು ಮಾಡುತ್ತಿರುವ ಆರ್. ಅಶೋಕ್ ಹಾಗೂ ಬಿವೈ ವಿಜಯೇಂದ್ರ ಅವರೇ, ನಿಮ್ಮ ಗಮನಕ್ಕೆ ಈ ಕೆಲವು ವಿಚಾರಗಳನ್ನು ತರಲು ಇಚ್ಛಿಸುತ್ತೇನೆ ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಡಿಸೆಂಬರ್ ೨೯ರಂದು ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಮಾತ್ರ ಹಾರಿಸುತ್ತೇವೆ ಎಂದು ಶ್ರೀ ಗೌರಿಶಂಕರ ಸೇವಾ ಟ್ರಸ್ಟ್ ನವರು ಧ್ವಜ ಸ್ಥಂಭಕ್ಕೆ ಅನುಮತಿ ಕೇಳಿದ್ದಾರೆ. ಇದೇ ಜನವರಿ ೧೭ರಂದು ಧ್ವಜ ಸ್ಥಂಭದಲ್ಲಿ ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜವನ್ನು ಬಿಟ್ಟು ಇನ್ನಿತರ ಯಾವುದೇ ರಾಜಕೀಯ, ಧಾರ್ಮಿಕ ಧ್ವಜವವನ್ನು ಹಾರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟು ಸಹಿ ಮಾಡಿದ್ದಾರೆ. ಜನವರಿ ೧೮ರಂದು ಕೆರೆಗೋಡು ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ರಾಷ್ಟ್ರ ಧ್ವಜ ಹಾಗೂ ನಾಡ ಧ್ವಜಾರೋಹಣಕ್ಕೆ ಮಾತ್ರ ಷರತ್ತುಗಳೊಂದಿಗೆ ಅನುಮತಿ ಪತ್ರ ನೀಡಿದ್ದಾರೆ.

ಧ್ವಜಾರೋಹಣಕ್ಕೆ ಸಂಬಂಧಿಸಿದಂತೆ ಸರ್ಕಾರ ಮಾಡುವ ಮಾರ್ಪಾಡುಗಳಿಗೆ ಬದ್ಧರಾಗಿರಬೇಕೆಂದು ತಿಳಿಸಲಾಗಿದೆ. ಯಾವುದೇ ಗಲಭೆಗಳಿಗೆ ಅವಕಾಶ ಮಾಡಿಕೊಡದಂತೆ ಷರತ್ತು ವಿಧಿಸಲಾಗಿದೆ. ಧ್ವಜಾರೋಹಣ ಮಾಡುವ ೬-೭ ದಿನ ಮುಂಚಿತವಾಗಿ ಗ್ರಾಮ ಪಂಚಾಯ್ತಿ ಹಾಗೂ ಪೊಲೀಸರಿಗೆ ತಿಳಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ರಾಷ್ಟ್ರ ಧ್ವಜದ ಬದಲು ಏಕಾಏಕಿ ಭಗವಾಧ್ವಜ ಹಾರಿಸುವ ಷಡ್ಯಂತ್ರ ರೂಪಿಸಿದ್ದು ಯಾರು?, ಅನುಮತಿ ಪತ್ರದ ಷರತ್ತುಗಳನ್ನು ಉಲ್ಲಂಘಿಸಲು ಪ್ರೇರೇಪಿಸಿದ್ದು ಯಾರು?, ಬಿಜೆಪಿ ಅದೆಷ್ಟು ದಿನಗಳಿಂದ ಶಾಂತಿ ಕೆಡಿಸುವ ಸಂಚು ರೂಪಿಸಿತ್ತು?, ಕಾನೂನು, ನೀತಿ ನಿಯಮಗಳನ್ನು ಬಿಜೆಪಿ ಕಾಲ ಕೆಳಗಿನ ಕಸದಂತೆ ನೋಡುವುದೇಕೆ?, ತ್ರಿವರ್ಣ ಧ್ವಜವನ್ನು ವಿರೋಧಿಸಿದ್ದ ಆರ್‌ಎಸ್‌ಎಸ್ ಹೇಳಿಕೊಟ್ಟ ಪಾಠದಂತೆ ಬಿಜೆಪಿಯು ತಿರಂಗಾ ಕಂಡರೆ ಉರಿದು ಬೀಳುತ್ತಿದೆ, ರಾಷ್ಟ್ರ ಧ್ವಜಕ್ಕೆ ಕೈ ಮುಗಿಯುವ ಬದಲು ಕೆಂಡ ಕಾರುತ್ತಿದೆ ಎಂದು ಪ್ರಿಯಾಂಕ್ ಟೀಕಿಸಿದ್ದಾರೆ.

ರಾಷ್ಟ್ರ ಧ್ವಜವನ್ನು ದ್ವೇಷಿಸುವ ಮೂಲಕ ಬಿಜೆಪಿಗರು ತಮಗೆ ತಾವೇ ದೇಶದ್ರೋಹಿಗಳು ಎಂದು ಪ್ರಮಾಣ ಪತ್ರ ಕೊಟ್ಟುಕೊಂಡಿದ್ದಾರೆ. ಬಿಜೆಪಿಗರಿಗೆ ದೇಶದ ಧ್ವಜ, ದೇಶದ ಸಂವಿಧಾನ, ದೇಶದ ಐಕ್ಯತೆ ಇಷ್ಟವಿಲ್ಲವೆಂದರೆ ಅವರ ಪ್ರೀತಿಪಾತ್ರವಾದ ಪಾಕಿಸ್ತಾನಕ್ಕೆ ಹೋಗಲಿ ಎಂದು ಪ್ರಿಯಾಂಕ್ ಟೀಕಾಪ್ರಹಾರ ನಡೆಸಿದ್ದಾರೆ

RELATED ARTICLES
- Advertisment -
Google search engine

Most Popular