ಮಂಡ್ಯ: ಕೆರಗೋಡಿನಲ್ಲಿ ಹನುಮ ಧ್ವಜ ಕೆಳಗಿಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಧ್ವಜಕ್ಕೆ ತಾಲಿಬಾನ್ ಧ್ವಜ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಅಪಮಾನ ಮಾಡಿದ್ದಾರೆಂದು ಆರೋಪಿಸಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ದೂರು ದಾಖಲಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಹಿಂದಿ ಭಾಷೆಯಲ್ಲಿ ಹೇಳಿಕೆ ನೀಡಿದ್ದಾರೆಂದು ಸಿ.ಟಿ.ರವಿ ವಿರುದ್ಧ ಮಂಡ್ಯ ಎಸ್ಪಿ ಎನ್.ಯತೀಶ್ ಗೆ ನರೇಂದ್ರಸ್ವಾಮಿ ದೂರು ನೀಡಿದ್ದಾರೆ.

ಈ ಸಂದರ್ಭ ಮಾತನಾಡಿದ ಶಾಸಕ ನರೇಂದ್ರ ಸ್ವಾಮಿ, ಸಿ.ಟಿ ರವಿಗೆ ಸರಿಯಾಗಿ ಹಿಂದಿ ಬರಲ್ಲ. ಬಹಳ ಕಷ್ಟ ಪಟ್ಟು ಮಾತ್ನಾಡಿದ್ದಾನೆ. ತಾಲಿಬಾನ್ ಧ್ವಜ ಹಾರಸಿಲಿಕ್ಕೆ ಬಿಡಲ್ಲ ಅಂದಿದ್ದಾನೆ. ರಾಷ್ಟ್ರಧ್ವಜಕ್ಕೆ ತಾಲಿಬಾನ್ ಧ್ವಜ ಅಂತನಾಲ್ಲ ಇದು ಸರಿನಾ…? ಸಚಿವನಾಗಿ ಕೆಲಸ ಮಾಡಿರುವಂತ ವ್ಯಕ್ತಿ ಈ ರೀತಿ ಮಾತ್ನಾಡಬಹುದಾ…? ಇವನಿಗೆ ರಾಷ್ಟ್ರಭಕ್ತಿ ಇದ್ಯಾ..? ನನಗೆ ಮಾನಸಿಕವಾಗಿ ಬಹಳ ಬೇಸರವಾಯ್ತು. ನನ್ನ ಧ್ವಜಕ್ಕೆ ಅಪಮಾನ ಮಾಡಿದ್ದಾನೆ. ಅದಕ್ಕೆ ದೂರು ನೀಡಿದ್ದೇನೆ. ನನ್ನ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಸಿಟಿ ರವಿ ವಿರುದ್ಧ ಕ್ರಮ ಆಗಬೇಕು ಅಂತಾ ದೂರು ನೀಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಸರ್ಕಾರಕ್ಕೆ ರಾಜ್ಯದಲ್ಲಿ ಮೊದಲು ಬೀಜ ಹಾಕಿದ್ದೇ ನಾನು
ಶಾಸಕ ಪಿಎಂ ನರೇಂದ್ರಸ್ವಾಮಿಗೆ ಸೀಡ್ಲೇಸ್ ಎಂದ ಸಿ.ಟಿ ರವಿ ಹೇಳಿಕೆಗೆ ಪ್ರತಿಕ್ರಿಯಿಸಿ, ಬಿಜೆಪಿ ಸರ್ಕಾರಕ್ಕೆ ರಾಜ್ಯದಲ್ಲಿ ಮೊದಲು ಬೀಜ ಹಾಕಿದ್ದೇ ನಾನು ಎಂದು ತಿರುಗೇಟು ನೀಡಿದರು.

2008ರಲ್ಲಿ ನಾನು ಪಕ್ಷೇತರನಾಗಿ ಗೆದ್ದಾಗ ಸಿ.ಟಿ ರವಿ ನಂಗೆ ಎಷ್ಟು ಸರಿ ಕಾಲ್ ಮಾಡಿ ಮಾತ್ನಾಡಿದ್ದಾನೆ ಅಂತಾ ನನಗೆ ಗೊತ್ತು. ನನ್ನನ್ನ ಕರೆದು ಸರ್ಕಾರ ರಚನೆ ಮಾಡಕ್ಕೆ ಮಾತ್ನಾಡಿದ್ರು. 2008 ರಲ್ಲಿ ನಮ್ಮಿಂದಲೇ ಮೊದಲು ಬಿಜೆಪಿ ಸರ್ಕಾರ ಬಂದಿದ್ದು. ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಬೀಜ ಹಾಕಿದ್ದೇ ನಾನು. ಇವಾಗ ಹೇಳಿ ಯಾರು ಸೀಡ್ಲೇಸ್ ಅಂತಾ…? ಎಂದು ಪ್ರಶ್ನಿಸಿದರು.
ಸಚಿವ ಸ್ಥಾನಕ್ಕಾಗಿ ನರೇಂದ್ರಸ್ವಾಮಿ ಹೇಳಿಕೆ ಕೊಡುತ್ತಿದ್ದಾರೆ ಎಂಬ ಸಿ.ಟಿ ರವಿ ಹೇಳಿಕೆ ಕುರಿತು ಮಾತನಾಡಿ, ನಮ್ಮ ಪಕ್ಷದ ವಿಚಾರ ನಿಮಗೇಕೆ..? ನಾವು ಏನಾದ್ರೂ ಮಾಡ್ಕೊತೀವಿ. ಅದು ನಿಮಗ್ಯಾಕೆ. ನಾನು ಖರ್ಗೆ ಅವರತ್ತಿರಾನೋ, ರಾಹುಲ್ ಗಾಂಧಿಯವರತ್ತಾನೋ ಗುದ್ದಾಡ್ತಿನಿ. ನೀವು ಯಾವಾಗ ಒಮ್ಮತದಿಂದ ಅಧಿಕಾರಕ್ಕೆ ಬಂದಿದ್ದೀರಿ. ಇದುವರೆಗೂ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ. ನಿಮ್ಮದು ನೀವು ನೋಡಿಕೊಳ್ಳಿ ಎಂದು ಶಾಸಕ ನರೇಂದ್ರಸ್ವಾಮಿ ತಿರುಗೇಟು ನೀಡಿದರು.