Monday, April 21, 2025
Google search engine

Homeರಾಜ್ಯಸುದ್ದಿಜಾಲಶಿಕ್ಷಣಕ್ಕೆ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಲು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ

ಶಿಕ್ಷಣಕ್ಕೆ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಲು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ

ಚಾಮರಾಜನಗರ: ಕಟ್ಟಡ ಕಾರ್ಮಿಕರು ಶ್ರಮ ಜೀವಿಗಳಾಗಿದ್ದು ಮಕ್ಕಳ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿ ಉತ್ತಮ ಭವಿಷ್ಯ ರೂಪಿಸಬೇಕೆಂದು ಶಾಸಕರು ಹಾಗೂ ಮೈಸೂರು ಸೇಲ್ಸ್ ಇಂಟರ್‍ನ್ಯಾಷನಲ್ ಲಿಮಿಟೆಡ್ (ಎಂಎಸ್‍ಐಎಲ್) ಅಧ್ಯಕ್ಷ ಸಿ. ಪುಟ್ಟರಂಗಶೆಟ್ಟಿ ಅವರು ಸಲಹೆ ಮಾಡಿದರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೊಂದಾಯಿತ ಅರ್ಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಬೇಕು. ಸಮಾಜದಲ್ಲಿ ಬದುಕು ಹಸನಾಗಲು ಶಿಕ್ಷಣ ಅತಿ ಮುಖ್ಯವಾಗಿದೆ. ಉನ್ನತ ಶಿಕ್ಷಣ ನೀಡಿ ಉನ್ನತ ಹುದ್ದೆಗಳನ್ನು ಪಡೆಯಲು ಅಗತ್ಯವಿರುವ ಎಲ್ಲ ಪ್ರೋತ್ಸಾಹ ನೀಡಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಮಕ್ಕಳ ಭವಿಷ್ಯ ಉಜ್ವಲಗೊಳಿಸಬೇಕು ಎಂದರು. ಸರ್ಕಾರ ಶ್ರಮಿಕರ ಶ್ರೇಯೋಭಿವೃದ್ದಿಗೆ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಪಾರದರ್ಶಕವಾಗಿ ಅರ್ಹರಿಗೆ ತಲುಪಿಸುವ ಹೊಣೆಗಾರಿಕೆ ಅಧಿಕಾರಿಗಳ ಮೇಲಿದೆ. ಅರ್ಹರನ್ನು ಗುರುತಿಸಿ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಬೇಕಿರುವ ಎಲ್ಲ ನೆರವನ್ನು ಅಧಿಕಾರಿ ವರ್ಗ ಮಾಡಬೇಕಿದೆ ಎಂದು ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅತೀ ಹೆಚ್ಚು ಅಂಕಗಳಿಸಬೇಕು. ವಿದ್ಯಾರ್ಥಿ ಜೀವನದ ಪ್ರತಿ ಹಂತದಲ್ಲಿಯೂ ಏಕಾಗ್ರತೆಯಿಂದ ವ್ಯಾಸಂಗ ಮಾಡಿ ಅಗ್ರ ಸ್ಥಾನ ಪಡೆಯಬೇಕು. ಪ್ರತಿದಿನ ಓದಿನ ಕಡೆಗೆ ಆಸಕ್ತಿ ಇರಲೇಬೇಕು. ಉನ್ನತ ಉದ್ಯೋಗ ಸಿಗುವವರೆಗೂ ನಿರಂತರ ಅಧ್ಯಯನ ಮುಂದುವರೆಸಬೇಕು ಎಂದು ಕಿವಿಮಾತು ಹೇಳಿದರು. ಕಷ್ಟಪಟ್ಟು ನಿಮ್ಮ ಪೋಷಕರು ನಿಮ್ಮ ಏಳಿಗೆಗೆ ದುಡಿಯುತ್ತಿದ್ದಾರೆ. ಅವರು ಎಲ್ಲವನ್ನು ತ್ಯಾಗ ಮಾಡಿ ನಿಮ್ಮ ಭವಿಷ್ಯ ಉತ್ತಮಗೊಳಿಸಲು ಮುಂದಾಗಿದ್ದಾರೆ. ಮುಂದೆ ಪೋಷಕರು ಖುಷಿ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ನಿಮಗಾಗಿ ಹಗಲಿರುಳು ದುಡಿದ ತಂದೆ ತಾಯಿ ಪೋಷಕರಿಗೆ ಒಳ್ಳೆಯ ಹೆಸರು ತರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಅವರು ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ. ಸವಿತಾ ಅವರು ಮಾತನಾಡಿ ನೊಂದಾಯಿತ ಅರ್ಹ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಅವರ ಮೆರಿಟ್ ಆಧಾರದ ಮೇಲೆ ಲ್ಯಾಪ್‍ಟಾಪ್ ನೀಡಲಾಗುತ್ತಿದೆ. ಪ್ರತಿ ತಾಲೂಕಿಗೆ 40ರಂತೆ ಜಿಲ್ಲೆಯಲ್ಲಿ ಒಟ್ಟು 200 ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಸೌಲಭ್ಯ ಸಿಗುತ್ತಿದೆ. ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆದಿದೆ. ಯಾವುದೇ ಮಧ್ಯವರ್ತಿಗಳಿಗೆ ಅವಕಾಶವಿಲ್ಲದೆ ನೇರವಾಗಿ ಅರ್ಹರಿಗೆ ಇಲಾಖೆಯ ಯೋಜನೆಗಳನ್ನು ತಲುಪಿಸಲಾಗುತ್ತಿದೆ ಎಂದರು. ಕಾರ್ಮಿಕ ನಿರೀಕ್ಷಕರಾದ ವೀಣಾ, ಜಿಲ್ಲಾ ಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯದರ್ಶಿ ಮಹೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular