Tuesday, April 22, 2025
Google search engine

Homeಅಪರಾಧಕೇರಳ ಬಿಜೆಪಿ ಮುಖಂಡನ ಹತ್ಯೆ: ೧೫ ಜನರಿಗೆ ಗಲ್ಲು ಶಿಕ್ಷೆ

ಕೇರಳ ಬಿಜೆಪಿ ಮುಖಂಡನ ಹತ್ಯೆ: ೧೫ ಜನರಿಗೆ ಗಲ್ಲು ಶಿಕ್ಷೆ

ಆಲಪ್ಪುಳ: ಕೇರಳದಲ್ಲಿ ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಅವರ ಹತ್ಯೆಗೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ)ಗೆ ಸೇರಿದ ೧೫ ಜನರಿಗೆ ಕೇರಳ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ. ೨೦೨೧ರ ಡಿಸೆಂಬರ್‌ನಲ್ಲಿ ಆಲಪ್ಪುಳ ಜಿಲ್ಲೆಯಲ್ಲಿ ಹತ್ಯೆ ನಡೆದಿತ್ತು. ಆಗ ರಂಜಿತ್ ಶ್ರೀನಿವಾಸನ್ ಬಿಜೆಪಿ ಒಬಿಸಿ ವಿಭಾಗದ ಮುಖಂಡರಾಗಿದ್ದರು. ಅಪರಾಧಿಗಳು ರಂಜಿತ್ ಶ್ರೀನಿವಾಸನ್‌ನನ್ನು ಆತನ ತಾಯಿ, ಮಗು ಮತ್ತು ಹೆಂಡತಿಯ ಮುಂದೆ ಬಹಳ ಕ್ರೂರವಾಗಿ ಹಾಗೂ ಪೈಶಾಚಿಕ ರೀತಿಯಲ್ಲಿ ಕೊಲೆಗೈದಿದ್ದರು.

ಈ ವೇಳೆ ರಂಜಿತ್ ಅವರ ತಾಯಿ, ಪತ್ನಿ ಹಾಗೂ ಮಗಳ ಎದುರಲ್ಲೇ ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರು ಭೀಕರವಾಗಿ ಹತ್ಯೆ ಮಾಡಿದ್ದರು. ಈ ವೇಳೆ ರಂಜಿತ್ ರಕ್ಷಣೆಗೆ ಬಂದಿದ್ದ ಅವರ ತಾಯಿ, ಪತ್ನಿ ಹಾಗೂ ಸ್ಥಳೀಯರ ಮೇಲೂ ದಾಳಿ ಮಾಡಲಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಲವು ಪಿಎಫ್‌ಐ ಹಾಗೂ ಎಸ್‌ಡಿಪಿಐ ಕಾರ್ಯಕರ್ತರನ್ನು ಬಂಧಿಸಿದ್ದರು. ಕೃತ್ಯದಲ್ಲಿ ಭಾಗಿಯಾಗಿದ್ದ ೧೫ ಜನರನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದರು. ರಂಜಿತ್ ಶ್ರೀನಿವಾಸನ್ ಹತ್ಯೆಗೂ ಮುನ್ನಾ ದಿನ ಎಸ್‌ಡಿಪಿಐನ ನಾಯಕ ಕೆ.ಎಸ್ ಶಾನ್ ಅವರ ಹತ್ಯೆ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ವಿಚಾರಣೆ ನಡೆದಿತ್ತು. ವಾದ ವಿವಾದದಲ್ಲಿ ಪ್ರಾಸಿಕ್ಯೂಷನ್ ೧೫೬ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತು. ಸಾವಿರಕ್ಕೂ ಹೆಚ್ಚು ದಾಖಲೆಗಳು, ನೂರಕ್ಕೂ ಹೆಚ್ಚು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದಲ್ಲದೇ ಬೆರಳಚ್ಚುಗಳು, ಸಿಸಿಟಿವಿ ದೃಶ್ಯಾವಳಿಗಳು, ಗೂಗಲ್ ಮ್ಯಾಪ್ ಸೇರಿಂದತೆ ವೈಜ್ಞಾನಿಕ ಪುರಾವೆಗಳನ್ನು ಸಾಕ್ಷ್ಯಕ್ಕೆ ಬಳಸಲಾಗಿತ್ತು. ಅಂತಿಮವಾಗಿ ಮಾವೇಲಿಕ್ಕರ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ವಿ.ಜಿ. ಶ್ರೀದೇವಿ ಅವರು ಜನವರಿ ೨೦ರಂದು ಪಿಎಫ್‌ಐನ ೧೫ ಮಂದಿ ಕಾರ್ಯಕರ್ತರು ದೋಷಿಗಳೆಂದು ಘೋಷಣೆ ಮಾಡಿದ್ದರು. ತೀರ್ಪು ಪ್ರಕಟಿಸಿ ಎಲ್ಲರಿಗೂ ಮರಣದಂಡನೆ ಶಿಕ್ಷೆ ವಿಧಿಸಿದ್ದಾರೆ.

ಮರಣದಂಡನೆಗೆ ಗುರಿಯಾದ ಅಪರಾಧಿಗಳು: ನವಾಜ್, ಅನೂಪ್, ಸಫಾರುದ್ದೀನ್, ಮುನ್ಶಾದ್, ಮೊಹಮ್ಮದ್ ಅಸ್ಲಂ, ಸಲಾಂ ಪೊನ್ನಾದ್, ಶಮೀರ್, ನಸೀರ್, ಜಾಕೀರ್ ಹುಸೇನೆ, ಜಸೀಬ್ ರಾಜಾ, ಶಾಜಿ , ಶೆರ್ನಾಜ್ ಅಶ್ರಫ್, ನಿಜಾಂ, ಅಜ್ಮಲ್ ಹಾಗೂ ಅಬ್ದುಲ್ ಕಲಾಂ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಹತ್ಯೆಯಲ್ಲಿ ೮ ಅಪರಾಧಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
೧೫ ಅಪರಾಧಿಗಳ ಪೈಕಿ ಒಬ್ಬ ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

RELATED ARTICLES
- Advertisment -
Google search engine

Most Popular