ಗುಂಡ್ಲುಪೇಟೆ: ಚಿಕ್ಕಲ್ಲೂರು ಜಾತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ತಾಲೂಕಿನ ಲಕ್ಕೂರು ಗೇಟ್ ಬಳಿ ಟಾಟಾ ಏಸ್ ಹಾಗು ಕೆಎಸ್‌ಆರ್‍ಟಿಸಿ ಬಸ್ ನಡುವೆ ಜರುಗಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ದಾಖಲಾಗಿದ್ದ ನಾಗರಾಜು(೧೮) ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ತಾಲೂಕಿನ ಹಂಗಳ ಗ್ರಾಮದಿಂದ ಶನಿವಾರ ಕೊಳ್ಳೇಗಾಲದ ಚಿಕ್ಕಲ್ಲೂರು ಜಾತ್ರೆಗೆ ಒಂಭತ್ತು ಜನರು ಟಾಟಾ ಏಸ್ ವಾಹನದಲ್ಲಿ ತೆರಳಿದ್ದಾಗ ನಡೆದ ಅಪಘಾತದಲ್ಲಿ ಸಿದ್ದರಾಜು ಎಂಬಾತ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಇಬ್ಬರ ಸ್ಥಿತಿ ಚಿಂತಾಜನಕವಾದ ಹಿನ್ನೆಲೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಮೈಸೂರಿನ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಈ ಇಬ್ಬರಲ್ಲಿ ಚಿಕಿತ್ಸೆ ಫಲಿಸದೆ ನಾಗರಾಜು ಎಂಬ ಯುವಕ ಸಾವನ್ನಪ್ಪಿದ್ದಾನೆ. ಉಳಿದ ತೇಜಶ್ ಎಂಬಾತನ ಸ್ಥಿತಿ ಸಹ ಗಂಭೀರವಾಗಿದೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.