Monday, April 21, 2025
Google search engine

Homeರಾಜ್ಯರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸಿಎಂ ಪತ್ರ

ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಸಿಎಂ ಪತ್ರ

ಬೆಂಗಳೂರು: ರಾಯಚೂರು ಜಿಲ್ಲೆಯಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಸ್ಥಾಪಿಸಬೇಕು ಎಂಬ ರಾಜ್ಯದ ಪ್ರಸ್ತಾವನೆಯನ್ನು ಮುಂಬರುವ ತಮ್ಮ ಬಜೆಟ್‌ನಲ್ಲಿ ಮಂಜೂರು ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ನಾಳೆ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ.

ರಾಯಚೂರು ಕಲ್ಯಾಣ ಕರ್ನಾಟಕ ಭಾಗದ ಮಹತ್ವದ ಜಿಲ್ಲೆಯಾಗಿದೆ. ಅಲ್ಲಿ ಆರೋಗ್ಯ, ಶಿಕ್ಷಣ ಮತ್ತು ತಲಾ ಆದಾಯದ ಮಟ್ಟವು ಕರ್ನಾಟಕದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇನ್ನೂ ಕಡಿಮೆ ಇದೆ. ರಾಯಚೂರು ಜಿಲ್ಲೆಯಲ್ಲಿ ಉನ್ನತ ಗುಣಮಟ್ಟದ ರೆಫರಲ್ ವೈದ್ಯಕೀಯ ಕೇಂದ್ರ ಸ್ಥಾಪಿಸುವ ತುರ್ತು ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಜನವರಿ ೨೯ರ ಕೇಂದ್ರ ಹಣಕಾಸು ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಏಮ್ಸ್ ಸ್ಥಾಪನೆಯ ಪ್ರಸ್ತಾವನೆಯು ಸಾಕಷ್ಟು ಸಮಯದಿಂದ ಬಾಕಿ ಉಳಿದಿದೆ. ರಾಜ್ಯ ಸರ್ಕಾರವು ಸಂಭವನೀಯ ಸ್ಥಳಗಳನ್ನು ಪರಿಗಣಿಸಿ, ರಾಯಚೂರು ಏಮ್ಸ್ ಸ್ಥಾಪಿಸಲು ಅತ್ಯಂತ ಸೂಕ್ತ ಸ್ಥಳವಾಗಿದೆ ಎಂದು ಸಿಎಂ ಅಭಿಪ್ರಾಯಪಟ್ಟಿದ್ದಾರೆ.

ಆದ್ದರಿಂದ ಮುಂಬರುವ ೨೦೨೪-೨೫ರ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ ಎಂದು ಸಿಎಂ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ತಮ್ಮ ಪತ್ರಕ್ಕೆ, ಜೂನ್ ೧೭, ೨೦೨೩ ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಅವರಿಗೆ ಬರೆದ ಪತ್ರದ ಪ್ರತಿಯನ್ನು ಸಹ ಲಗತ್ತಿಸಿದ್ದಾರೆ.

RELATED ARTICLES
- Advertisment -
Google search engine

Most Popular