ಮದ್ದೂರು: ಜಿಲ್ಲೆಯ ಕೆರಗೋಡುನಲ್ಲಿ ಇತ್ತೀಚೆಗೆ ನಡೆದ ಹನುಮ ಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ತನ್ನ ನಿರ್ಧಾರಕ್ಕೆ ಬದ್ಧವಿದೆ ಎಂದು ಶಾಸಕ ಉದಯ್ ತಿಳಿಸಿದರು.
ತಾಲ್ಲೂಕಿನ ಅಗರಲಿಂಗನ ದೊಡ್ಡಿ ಗ್ರಾಮದಲ್ಲಿ ಮಂಗಳವಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈ ವಿಷಯದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ನಾಯಕರುಗಳು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ, ಸಾರ್ವಜನಿಕವಾಗಿ ಧ್ವಜ ಸ್ಥoಭದ ವಿಷಯದಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿದಿದ್ದರೂ ಪರಿಸ್ಥಿತಿಯ ಲಾಭ ಪಡೆಯಲು ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಾತ್ಯತೀತ ಎನ್ನುತ್ತಿದ್ದವರು ಈಗ ಕೇಸರಿ ಶಾಲು ಹಾಕಿಕೊಂಡು, ಯುವಕರನ್ನು ದಿಕ್ಕುತಪ್ಪಿಸಿಕೊಂಡು ಪಾದಯಾತ್ರೆ ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿರವರ ಹೆಸರೇಳದೆ ಪರೋಕ್ಷವಾಗಿ ಟೀಕಿಸಿದ ಅವರು ನೆನ್ನೆ ಮಂಡ್ಯದಲ್ಲಿ ಕಾಂಗ್ರೆಸ್ ಪಕ್ಷದ ಫ್ಲೆಕ್ಸ್ ಗಳನ್ನು ಹರಿದು ಹಾಕಿರುವ ಕಿಡಿಗೇಡಿಗಳ ಕೃತ್ಯ ಎಷ್ಟು ಸರಿ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಕೆರಗೋಡುಗೆ ಬಂದು ಶಾಂತಿ ಸಭೆ ನಡೆಸಬೇಕು ಎಂದು ಮಾಜಿ ಮಂತ್ರಿ ಗಾಲಿ ಜನಾರ್ಧನ ರೆಡ್ಡಿ ಒತ್ತಾಯಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದವರು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ನಡೆದಿರುವ ಈ ಘಟನೆಗೆ ಮುಖ್ಯಮಂತ್ರಿಗಳು ಯಾಕೆ ಶಾಂತಿ ಸಭೆಯನ್ನು ನಡೆಸಬೇಕು ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ಅವರು,ತಾಲೂಕಿನಲ್ಲಿರುವ ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾದೆ. ಅಗರಲಿಂಗನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 47 ಲಕ್ಷ ರೂ.ಗಳ ವೆಚ್ಚದಲ್ಲಿ 3 ಕೊಠಡಿಗಳಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಅಗರಲಿಂಗನದೊಡ್ಡಿ ಈ ಹಿಂದೆ ಗ್ರಾಮದಲ್ಲಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 2019-20 ಸಾಲಿನಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ನಿರ್ಮಾಣಕ್ಕೆ ಶಾಲಾ ನಿವೇಶನ ಮತ್ತು ಕಟ್ಟಡ ಸ್ವಾಧೀನಕ್ಕೆ ಒಳಪಟ್ಟಿತ್ತು. ಆದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ 3 ಕೊಠಡಿಗಳ ಶಾಲೆಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದರು.
ಬಿಇಒ ಸಿ.ಎಚ್.ಕಾಳೀರಯ್ಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ್, ಮುಖಂಡರಾದ ಪುಟ್ಟಪ್ಪ, ದಾಸಲಿಂಗ, ಬೊಮ್ಮೇಗೌಡ, ರವಿ, ಸತೀಶ್, ಕೃಷ್ಣ ಸೇರಿದಂತೆ ಇತರರು ಪಾಲ್ಗೊಂಡಿದ್ದರು.