Saturday, April 19, 2025
Google search engine

Homeಅಪರಾಧಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಯುವಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ

ಪಾಂಡವಪುರ : ವಿವಾಹಿತ ಯುವಕನೊಬ್ಬನು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಯುವಕನ ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಪಟ್ಟಣ ನಿವೃತ್ತ ಉಪ ತಹಸಿಲ್ದಾರ್ ಸರಸ್ವತಿ ಎಂಬವರ ಮಗ ಗಂಗಾಧರ (೪೦) ಸಾವನ್ನಪ್ಪಿದ ಯುವಕನಾಗಿದ್ದಾನೆ. ಮದ್ರಾಸ್ ಮೂಲದ ಸಾಫ್ಟ್‌ವೇರ್ ಕಂಪನಿ ಉದ್ಯೋಗಿಯಾಗಿದ್ದ ಗಂಗಾಧರ, ೧೨ ವರ್ಷಗಳ ಹಿಂದೆ ತಾಲ್ಲೂಕಿನ ಕೆರೆತೊಣ್ಣೂರು ಗ್ರಾಮದ ಬಸವೇಗೌಡರ ಮಗಳು ಭವ್ಯ ಎಂಬವರನ್ನು ವಿವಾಹ ಆಗಿದ್ದರು. ಇವರಿಗೆ ೧೦ ವರ್ಷದ ಒಬ್ಬ ಮಗಳು ಸಹ ಇದ್ದಾಳೆ. ಕಳೆದ ೧೦ ವರ್ಷದಿಂದಲೂ ಸಂಸಾರದಲ್ಲಿ ಅನ್ಯೋನ್ಯತೆ ಇರಲಿಲ್ಲ. ಈ ಸಂಬಂಧ ಗಂಡ-ಹೆಂಡತಿ ನಡುವೆ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಕಳೆದ ೩ ತಿಂಗಳ ಹಿಂದೆ ಇಬ್ಬರೂ ಪರಸ್ಪರ ರಾಜಿ ಮಾಡಿಕೊಂಡು ಪಟ್ಟಣ ಶಾಂತಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ದರು. ಜ.೩೧ ರಂದು ಬುಧವಾರ ಮದ್ಯಾಹ್ನ ಭವ್ಯ ತಮ್ಮ ಅತ್ತೆ ಸರಸ್ವತಿ ಅವರಿಗೆ ಕರೆ ಮಾಡಿ ನಿಮ್ಮ ಮಗ ಸ್ನಾನದ ಮನೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ ಎಂದು ತಿಳಿಸಿದ್ದರು.

ಕೂಡಲೇ ಸರಸ್ವತಿ ಮತ್ತು ಅವರ ಮಗ ಶಶಿಧರ ಇಬ್ಬರು ಗಂಗಾಧರ ಅವರ ಮನೆಗೆ ಹೋಗಿ ನೋಡಲಾಗಿ ಆತ ಬಚ್ಚಲು ಮನೆಯಲ್ಲಿ ಬೆತ್ತಲಾಗಿ ಅಂಗಾತ ಬಿದ್ದಿದ್ದನು, ಬಳಿಕ ಕೂಡಲೇ ಸಮೀಪದ ಬಾಬು ನರ್ಸಿಂಗ್ ಹೋಂಗೆ ಗಂಗಾಧರನನ್ನು ಆಟೋದಲ್ಲಿ ಹಾಕಿಕೊಂಡು ತಂದಾಗ ಅಲ್ಲಿನ ವೈದ್ಯರು ಗಂಗಾಧರ ಈಗಾಗಲೇ ಮೃತಪಟ್ಟಿರುವುದಾಗಿ ಹೇಳಿದರು ಎಂದು ಸರಸ್ವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ನನ್ನ ಮಗನ ಸಾವು ಅನುಮಾನಾಸ್ಪದವಾಗಿದ್ದು, ಇದಕ್ಕೆ ಗಂಗಾಧರನ ಹೆಂಡತಿ ಭವ್ಯ, ಮಾವ ಬಸವೇಗೌಡ ನವೀನ ಮತ್ತು ಆತನ ಹೆಂಡತಿ ಕಾರಣರಾಗಿದ್ದಾರೆ ಇವರ ವಿರುದ್ಧ ಕ್ರಮ ಜರುಗಿಸುವಂತೆ ಸರಸ್ವತಿ ದೂರಿನಲ್ಲಿ ಕೋರಿದ್ದಾರೆ.

ಶವಾಗಾರದ ಮುಂದೆ ಆಕ್ರೋಶ: ಮೃತ ಗಂಗಾಧರನ ಶವವನ್ನು ಇಡಲಾಗಿದ್ದ ಪಾಂಡವಪುರ ಸರ್ಕಾರಿ ಆಸ್ಪತ್ರೆ ಶವಾಗಾರದ ಎದುರು ನೂರಾರು ಜನರು ಜಮಾಯಿಸಿದ್ದರು. ಈ ವೇಳೆ ಮೃತ ಗಂಗಾಧರ ಅವರ ತಾಯಿ ಸರಸ್ವತಿ ಅವರ ರೋಧನ ಮುಗಿಲು ಮುಟ್ಟಿತ್ತು. ನನ್ನ ಮಗ ಮದುವೆಯಾದ ಬಳಿಕ ಒಂದು ದಿನವೂ ಸುಖವಾಗಿರಲಿಲ್ಲ, ನನ್ನ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಸರಸ್ವತಿ ರೋದಿಸುತ್ತಿದ್ದುದು ಕಂಡುಬಂತು.

ಪೊಲೀಸರ ಜತೆ ವಾಗ್ವಾದ : ಪೊಲೀಸರು ಪ್ರಭಾವಿಗಳ ಪ್ರಭಾವಕ್ಕೆ ಮಣಿದು ಸಮರ್ಪಕವಾಗಿ ದೂರು ದಾಖಲಿಸಿಲ್ಲ. ಆರೋಪಿಗಳನ್ನು ಬಂದಿಸಿಲ್ಲ ಎಂದು ಮೃತ ಗಂಗಾಧರನ ಕಡೆಯವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೇರೆ ದೂರನ್ನು ಪಡೆದು ಪ್ರಕರಣ ದಾಖಲಿಸಬೇಕು. ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಶವಪರೀಕ್ಷೆ ನಡೆಸಬೇಕೆಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದವೂ ನಡೆಯಿತು.

ಶಾಸಕರಿಂದ ನ್ಯಾಯ ಕೊಡಿಸುವ ಭರವಸೆ
ವಿಷಯ ತಿಳಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸ್ಥಳಕ್ಕೆ ಭೇಟಿ ನೀಡಿ, ಯಾವುದೇ ಒತ್ತಡಕ್ಕೆ ಮಣಿಯದೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದರಲ್ಲದೇ, ಮೃತ ಗಂಗಾಧರನ ಕುಟುಂಬದವರಿಗೆ ನ್ಯಾಯ ದೊರಕಿಸುವ ಭರವಸೆ ನೀಡಿ ಶವ ಪರೀಕ್ಷೆಗೆ ಅಡ್ಡಿ ಪಡಿಸದಂತೆ ಮನವೊಲಿಸಿದರು.

RELATED ARTICLES
- Advertisment -
Google search engine

Most Popular