ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಕಾಡ್ಗಿಚ್ಚು ನಿಯಂತ್ರಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು. ಇದರಿಂದ ಅರಣ್ಯ ಸಂಪತ್ತು ವನ್ಯಜೀವಿ ಜೀವಸಂಕುಲಕ್ಕೆ ಹಾನಿಯಾಗಿ ಪರಿಸರ ಜನಜೀವನದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ ಎಂದು ಉಪ ವಲಯ ಅರಣ್ಯಾಧಿಕಾರಿ ಬಿ.ಎನ್.ಕುಮಾರ್ ಹೇಳಿದರು
ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದ ಗಾಂಧಿ ವೃತ್ತದಲ್ಲಿ ಅರಣ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅರಣ್ಯ ಪ್ರದೇಶದಲ್ಲಿ ಬೆಂಕಿ ತಡೆಗಟ್ಟುವ ಅರಿವು ಜಾಗೃತಿ ಜಾಥಾ, ಗೀತಾಗಾಯನ, ನೃತ್ಯರೂಪಕ, ಬೀದಿನಾಟಕ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೇಸಿಗೆ ಆರಂಭಕ್ಕೂ ಮೊದಲೇ ಕಾಡ್ಗಿಚ್ಚು ತಡೆಗೆ ಕೆ.ಆರ್.ನಗರ ಅರಣ್ಯ ಇಲಾಖೆ ಸಕಲ ಸಿದ್ಧತೆಯಲ್ಲಿ ತೊಡಗಿದೆ. ಇದಕ್ಕಾಗಿ ಅರಣ್ಯ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಬೀದಿ ನಾಟಕಗಳ ಮೂಲಕ ಜನರಿಗೆ ಕಾಡ್ಗಿಚ್ಚು ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಕಿ ರೇಖೆ ನಿರ್ವಹಣೆಯನ್ನು ಮುಂಜನಹಳ್ಳಿ ಹಾಗೂ ಭೇರ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಠದ ಕಾವಲ್ ರಕ್ಷಿತ ಅರಣ್ಯ ಪ್ರದೇಶದಲ್ಲಿ ಬರುವ ರಸ್ತೆಗಳ ಇಕ್ಕೆಲುಗಳಲ್ಲಿ ಬೆಂಕಿ ರೇಖೆ ಹಾಕಲಾಗುತ್ತಿದೆ. ಇದಕ್ಕಾಗಿ ಇಕ್ಕೆಲು ಪಕ್ಕದಲ್ಲಿ ಗಿಡ–ಗಂಟಿ ತೆರವುಗೊಳಿಸಲಾಗಿದೆ.
ಹುಲ್ಲು ಒಣಗಿದ ನಂತರ ಗಿಡ–ಗಂಟಿ ತೆರವುಗೊಳಿಸಿರುವ ಸ್ಥಳಗಳಲ್ಲಿ ಬೆಂಕಿ ರೇಖೆ ಹಾಕಲಾಗುತ್ತಿದೆ. ತಾಲ್ಲೂಕಿನ ಬೆಟ್ಟಹಳ್ಳಿ, ಹೆಬ್ಸೂರು, ಮಾರಗೌಡನಹಳ್ಳಿ, ಗೇರದಡ, ಕುಪ್ಪಳ್ಳಿ, ಮಳಲಿ, ಮಾದಹಳ್ಳಿ, ಕಗ್ಗಳ, ದಮ್ಮನಹಳ್ಳಿ, ಸಾಲೆಕೊಪ್ಪಲು ಸೇರಿದ ವಲಯ ವ್ಯಾಪ್ತಿಯಲ್ಲಿ ಬೆಂಕಿ ರೇಖೆ ನಿರ್ವಹಣೆ ಮಾಡಲಾಗಿದೆ ಎಂದು ತಿಳಿಸಿದರು.
ಅರಣ್ಯ ಪ್ರದೇಶದ ಪಕ್ಕದಲ್ಲಿ ಜಮೀನು ಹೊಂದಿರುವವರು ಗಿಡಗಂಟಗಳಿಗೆ ಬೆಂಕಿ ಹಾಕುವ ಮೊದಲು ಮುಂಜಾಗ್ರತಾ ಕ್ರಮಗಳನ್ನು ವಹಿಸಿ ಎಂದು ಮನವಿ ಮಾಡಿದ ಅವರು ಅರಣ್ಯ ಪ್ರದೇಶದಲ್ಲಿ ಹಾದು ಹೋಗಿರುವ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ಬೀಡಿ, ಸಿಗರೆಟ್ ಸೇದ ಬಾರದು, ಇದು ನಿಮ್ಮ ಕಾಡು ನೀವುನಾವು ಸೇರಿ ಕಾಡ್ಗಿಚ್ಚು ತಡಿಯೋಣ, ಪರಿಸರ ಹಾಗು ಪ್ರಾಣಿ ಸಂಕುಲ ಉಳಿಸೋಣ ಎಂದು ನೆರೆದಿದ್ದ ಜನರಲ್ಲಿ ಮನವಿ ಮಾಡಿದರು. ಇದಕ್ಕೂ ಮೊದಲು ಸರ್ಕಾರಿ ಶಾಲಾ ಮಕ್ಕಳಿಗೆ ಕಾಡ್ಗಿಚ್ಚು ಬಗ್ಗೆ ಮಾಹಿತಿ ನೀಡಿ, ನಿಮ್ಮೂರಿನಲ್ಲಿ ಕಾಡ್ಗಿಚ್ಚು ಬಗ್ಗೆ ಗಾಮಸ್ಥರಿಗೆ ತಿಳಿಸಿ ಎಂದರು.
ಕಾರ್ಯಕ್ರಮದಲ್ಲಿ ಪಶುವೈದ್ಯಾಧಿಕಾರಿ ಡಾ.ಹರೀಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ಪುಷ್ಪ ಲತ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ್, ಗಸ್ತು ಅರಣ್ಯಪಾಲಕರಾದ ಮಹದೇವ್, ಗಿಡ್ಡೀರೇಗೌಡ, ಕುಮಾರನಾಯಕ್, ಸ್ವಾಮಿ.ಕೆ.ಪಿ., ಅರಣ್ಯ ವೀಕ್ಷಕರಾದ ಹೊನ್ನೇಶ್, ಸಾಗರ್, ರಾಕೇಶ್, ಯೋಗೇಶ್, ಇದ್ದರು.