ಹಾಸನ: ಪಿಸ್ತೂಲ್ ಹಿಡಿದು ಮನೆಗೆ ನುಗ್ಗಿದ ಕಿಡಿಗೇಡಿಗಳು ಮನೆಯೊಳಗೆ ಗುಂಡು ಹಾರಿಸಿ ಬೆದರಿಸಿ ಚಿನ್ನಾಭರಣ ದರೋಡೆ ಮಾಡಿ ಎಸ್ಕೇಪ್ ಆಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರವಿ ಎಂಬುವವರ ಮನೆಯಲ್ಲಿ ನಿನ್ನೆ ಸಂಜೆ ದರೋಡೆ ನಡೆದಿದೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮನೆಗೆ ನುಗ್ಗಿದ ಇಬ್ಬರು ದರೋಡೆಕೋರರು ಮನೆಯಲ್ಲಿದ್ದ ಶೃತಿ ಹಾಗೂ ಅವರ ತಾಯಿ ಚಂದ್ರಮ್ಮ ಅವರಿಗೆ ಪಿಸ್ತೂಲ್ ತೋರಿಸಿ ಮೈಮೇಲಿದ್ದ ಚಿನ್ನಾಭರಣ ನೀಡುವಂತೆ ಹೆದರಿಸಿ ದರೋಡೆ ಮಾಡಿದ್ದಾರೆ.
ಇನ್ನು ಚಿನ್ನಾಭರಣ ನೀಡದಿದ್ದಕ್ಕೆ ಗೋಡೆಗೆ ಗುಂಡು ಹಾರಿಸಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. ಪಿಸ್ತೂಲ್ ನಿಂದ ಫೈಯರಿಂಗ್ ಆಗುತ್ತಿದ್ದಂತೆ ಹೆದರಿದ ಮಹಿಳೆಯರು ಮೈ ಮೇಲಿದ್ದ ಆಭರಣ ತೆಗೆದುಕೊಟ್ಟಿದ್ದಾರೆ. ಒಂದು ಚಿನ್ನದ ತಾಳಿ, ಒಂದು ಜೊತೆ ಚಿನ್ನದ ಓಲೆ, ಎರಡು ಚಿನ್ನದ ಗುಂಡು ಹಾಗೂ ಮೊಬೈಲ್ ಕಸಿದುಕೊಂಡು ಖದೀಮರು ಪರಾರಿಯಾಗಿದ್ದಾರೆ.
ಪಿಸ್ತೂಲ್ ಶಬ್ದ ಕೇಳಿ ಓಡಿ ಬಂದ ಶೃತಿ ಪತಿ ರವಿ ಕಳ್ಳರನ್ನು ಹಿಡಿಯಲು ಮುಂದಾದ ವೇಳೆ ಮತ್ತೊಮ್ಮೆ ಗಾಳಿಯಲ್ಲಿ ಗುಂಡು ಹಾರಿಸಿ ಕಳ್ಳರು ಪರಾರಿಯಾಗಿದ್ದಾರೆ. ಕಳ್ಳರ ಓಡಾಟದ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ.
ಸದ್ಯ ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.