ಚಿಕ್ಕಮಗಳೂರು: ಐದು ಸಾವಿರ ಸಾಲ ಪಡೆದಿದ್ದ ಯುವಕ ಸಾಲ ಹಿಂದಿರುಗಿಸಿಲ್ಲ ಎಂದು ಆರೋಪಿಸಿ ಯುವಕರ ಗುಂಪೊಂದು ಮದ್ಯಪಾನ ಮಾಡುತ್ತಾ ಸಾಲ ಪಡೆದವನ ಕೈ ಕಾಲು ಕಟ್ಟಿ, ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಕೊಪ್ಪ ತಾಲೂಕಿನ ಕರ್ಕೇಶ್ವರ ಗ್ರಾಮದಲ್ಲಿ ನಡೆದಿದೆ..
ಗ್ರಾಮದ ಸೋಮ್ಲಾಪುರ ರಸ್ತೆಯ ಪ್ಲಾಂಟೇಶನ್ ನಲ್ಲಿ ಐವರು ಯುವಕರ ಗುಂಪು ಕೆಲ ದಿನಗಳ ಹಿಂದೆ ಐದು ಸಾವಿರ ಸಾಲ ಪಡೆದ ಯುವಕನನ್ನು ಮರಕ್ಕೆ ಕಟ್ಟಿ ಹಾಕಿದ್ದಲ್ಲದೆ ಮದ್ಯಪಾನ ಮಾಡುತ್ತಲೇ ಮನಬಂದಂತೆ ಥಳಿಸಿದ್ದಾರೆ. ಹಲ್ಲೆ ಮಾಡುವುದನ್ನು ವಿಡಿಯೋ ಕೂಡಾ ಮಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸತೀಶ್ ಎಂಬಾತ ಯುವಕನೊಬ್ಬನಿಂದ ಐದು ಸಾವಿರ ಹಣ ಪಡೆದಿದ್ದ. ಸಾಲ ಹಿಂದಿರುಗಿಸಲು ಸತಾಯಿಸಿದ್ದ ಎನ್ನಲಾಗಿದ್ದು, ಇದರಿಂದ ಕೋಪಗೊಂಡ ಯುವಕ ತನ್ನ ಸಹಚರರೊಂದಿಗೆ ಸೇರಿಕೊಂಡು ಇತ್ತೀಚೆಗೆ ಸತೀಶ್ ನನ್ನು ಪ್ಲಾಂಟೇಶನ್ ಗೆ ಕರೆತಂದು ಆತನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಈ ವೇಳೆ ಯುವಕರು ಮದ್ಯಪಾನ ಮಾಡುತ್ತಾ ಸತೀಶ್ ಮೇಲೆ ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ.
ಹಲ್ಲೆಯಿಂದ ಸತೀಶ್ ಮೈ ಮೇಲೆ ರಕ್ತ ಸಿಕ್ತ ಬಾಸುಂಡೆ, ಗಾಯವಾಗಿದ್ದು ಕೊಪ್ಪ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಘಟನೆ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಮಹೇಶ್, ವಿಠಲ, ಸಿರಿಲ್, ಮಂಜು, ಸುನಿಲ್, ಕಟ್ಟೆಹಕ್ಲು ಮಂಜು ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.