Monday, April 21, 2025
Google search engine

Homeರಾಜ್ಯಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ: 35 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ

ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ: 35 ಕೋಟಿ ರೂ ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅನಧಿಕೃತ ಕಟ್ಟಡಗಳನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತೆರವುಗೊಳಿಸುತ್ತಿದೆ. ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಅಂದಾಜು 35 ಕೋಟಿ ರೂ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಬಿಡಿಎ ಆಯುಕ್ತ ಎನ್.ಜಯರಾಮ್ ನಿರ್ದೇಶನದಲ್ಲಿ ಹಾಗು ಆರಕ್ಷಕ ಅಧೀಕ್ಷಕ ಕೆ.ನಂಜುಂಡೇಗೌಡ ನೇತೃತ್ವದಲ್ಲಿ ಬೆಂಗಳೂರು ಉತ್ತರ ತಾಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿನ ಪ್ರಾಧಿಕಾರದ 32.45 ಗುಂಟೆ ಜಮೀನಿನಲ್ಲಿ ಸ್ಥಳೀಯರು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್ ​​ಗಳು, ಕಟ್ಟಡಗಳನ್ನು ತೆರವುಗೊಳಿಸಲಾಯಿತು.

ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರ ರವಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಂದ್ರಶೇಖರ್ ಹಾಗೂ ಆರಕ್ಷಕ ಉಪಾಧೀಕ್ಷಕ ಯು.ಡಿ.ಕೃಷ್ಣಕುಮಾರ್ ಮತ್ತು ಪೊಲೀಸ್ ಇನ್ಸ್ ​ಪೆಕ್ಟರ್ ಟಿ.ಸಂಜೀವರಾಯಪ್ಪ ಒಳಗೊಂಡಂತೆ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನೆರವೇರಿಸಲಾಗಿದೆ.

ಕಳೆದ ತಿಂಗಳು ಕೆಂಗೇರಿ ಬಳಿಯ ತುರಹಳ್ಳಿ ಮೀಸಲು ಅರಣ್ಯದ ಬಿ ಎಂ ಕಾವಲು ಬಫರ್ ವಲಯದಲ್ಲಿ ಒತ್ತುವರಿಯಾಗಿದ್ದ 60 ಕೋಟಿ ರೂ ಮಾರುಕಟ್ಟೆ ಮೌಲ್ಯದ 6.5 ಎಕರೆ ಜಮೀನನ್ನು ವಶಕ್ಕೆ ಪಡೆಯಲಾಗಿತ್ತು. ಒತ್ತುವರಿ ತೆರವು ಮಾಡಲು ಸಚಿವರು ಸೂಚಿಸಿದ ಹಿನ್ನೆಲೆ ಜೆಸಿಬಿಗಳು ಗರ್ಜಿಸಿದ್ದವು. ಬೆಂಗಳೂರು ನಗರ ಡಿಸಿಎಫ್ ರವೀಂದ್ರಕುಮಾರ್, ಎಸಿಎಫ್ ಸುರೇಶ್ ಮತ್ತು ಆರ್​ಎಫ್ ಓ ಗೋವಿಂದರಾಜ್ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ ತಂಡ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಮೀಸಲು ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಶೆಡ್​ನ್ನು ಜೆಸಿಬಿಗಳಿಂದ ನೆಲಸಮಗೊಳಿಸಲಾಯಿತು.

ಅರಣ್ಯ ಭೂಮಿ ವಶಕ್ಕೆ ಪಡೆದು ಗಡಿಯಲ್ಲಿ ಬಿದಿರು ಸೇರಿದಂತೆ ನಾನಾ ಜಾತಿ ಮರಗಳನ್ನು ನೆಡುವ ಮೂಲಕ ಮರು ವಶಕ್ಕೆ ಪಡೆದರು. ಈ ಅರಣ್ಯ ಪ್ರದೇಶದಲ್ಲಿ ಸುಮಾರು 6.5 ಎಕರೆಯಷ್ಟು ಭೂಮಿಯನ್ನು ಒತ್ತುವರಿ ಮಾಡಿ, ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರು. ಅರಣ್ಯ ಭೂಮಿಯಾದ ಕಾರಣ ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ ಎಂದು ಅರಣ್ಯ ಇಲಾಖೆ ತಿರಸ್ಕರಿಸಿತ್ತು.

ಒತ್ತುವರಿದಾರರ ಬಳಿ ಅರಣ್ಯ ಭೂಮಿಗೆ ಸಂಬಂಧಿಸಿದಂತೆ ಯಾವುದೇ ಕಂದಾಯ ದಾಖಲೆ, ಕ್ರಯಪತ್ರ, ಮಂಜೂರಾತಿ ಪತ್ರ, ಸಾಗುವಳಿ ಚೀಟಿ ಯಾವುದೂ ಇಲ್ಲದ ಕಾರಣ 2017ರ ಆಗಸ್ಟ್ ನಲ್ಲಿ ಈ ಒತ್ತುವರಿ ತೆರವಿಗೆ ಎಸಿಎಫ್ ನ್ಯಾಯಾಲಯ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಸಿಸಿಎಫ್ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.

RELATED ARTICLES
- Advertisment -
Google search engine

Most Popular