Saturday, April 19, 2025
Google search engine

Homeರಾಜ್ಯಸುದ್ದಿಜಾಲಜಿಲ್ಲೆಯಲ್ಲಿ ಮಾರ್ಚ್ 3 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಡಾ. ಕುಮಾರ

ಜಿಲ್ಲೆಯಲ್ಲಿ ಮಾರ್ಚ್ 3 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಡಾ. ಕುಮಾರ

ಮಂಡ್ಯ: ಜಿಲ್ಲೆಯಲ್ಲಿ ಮಾರ್ಚ್ 03 ರಂದು ಪಲ್ಸ್ ಪೋಲಿಯೋ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪೋಷಕರು ತಪ್ಪದೇ ತಮ್ಮ 0-5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕೊಡಿಸುವಂತೆ ಜಿಲ್ಲಾಧಿಕಾರಿ ಡಾ. ಕುಮಾರ ಅವರು ತಿಳಿಸಿದರು. ಅವರು ಇಂದು ಜಿಲ್ಲಾಧಿಕಾರಿ ಕಛೇರಿಯ ಸಭಾಂಗಣದಲ್ಲಿ ಪಲ್ಸ್ ಪೋಲಿಯೋ 2023-24 ಕಾರ್ಯಕ್ರಮ ಕುರಿತು ಜಿಲ್ಲಾ ಮಟ್ಟದ ಚಾಲನ ಸಮಿತಿ ಸಭೆಯಲ್ಲಿ ಮಾತನಾಡಿದರು. ಮಾರ್ಚ್ 03 ರಿಂದ 06 ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಮಾರ್ಚ್ 3 ರಂದು ಆರೋಗ್ಯ ಇಲಾಖೆಯ ತೆರೆಯುವ ಲಸಿಕಾ ಬೂತ್ ನಲ್ಲಿ ನೀಡಲಾಗುವುದು. ಮಾ.4 ರಿಂದ 6 ವರೆಗೆ ಮನೆ ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದಿರುವ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲು ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಳ್ಳಿ ಎಂದರು.

ಈ ಹಿಂದೆ ಎಷ್ಟು ಬಾರಿ ಪಲ್ಸ್ ಪೋಲಿಯೋ ಲಸಿಕೆ ನೀಡಿದರು ಸಹ ಹೆಚ್ಚುವರಿಯಾಗಿ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು( 5 ವರ್ಷದೊಳಗಿನ ) ಪಲ್ಸ್ ಪೋಲಿಯೋ ಲಸಿಕೆಯಿಂದ ವಂಚಿತರಾಗಬಾರದು. ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ ಕಾರ್ಯಕ್ರಮದ ವ್ಯಾಪಕ ಪ್ರಚಾರವಾಗಬೇಕು ಎಂದರು. ಜಿಲ್ಲೆಯಲ್ಲಿರುವ ಹಳ್ಳಿಗಳಲ್ಲಿ, ಅನಕ್ಷರಸ್ಥ ಕುಟುಂಬಗಳು, ಕೂಲಿ ಕಾರ್ಮಿಕರುಗಳ ಮನೆ ಮನೆಗೆ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಿ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಲು ತಿಳಿಸಬೇಕು ಎಂದರು.ಹೊರ ರಾಜ್ಯದಿಂದ ಕಬ್ಬು ಕಡಿಯಲು ಬಂದಿರುವ ಕುಟುಂಬಗಳಿಗೆ ಹಾಗೂ ವಲಸೆ ಕಾರ್ಮಿಕರು ಪಲ್ಸ್ ಪೋಲಿಯೋ ಲಸಿಕೆ ನೀಡಲು ಹೆಚ್ಚಿನ ನಿಗಾ ವಹಿಸಬೇಕು ಎಂದು ಸಂಬAಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಟಾಸ್ಕ್ ಪೋರ್ಸ್ ಕಮಿಟಿ ಸಭೆಯನ್ನು ತಾಲೂಕು ಆರೋಗ್ಯ ಅಧಿಕಾರಿಗಳು ನಿಗದಿತ ಅವಧಿ ಒಳಗೆ ನಡೆಸಿ ಸೂಕ್ತ ಕ್ರಮ ವಹಿಸಲು ಸೂಚಿಸಿದರು. ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ಅವರು ಮಾತನಾಡಿ ಪೋಲಿಯೋ ಮೆಲೈಟಿಸ್ ಅಥವಾ ಪೋಲಿಯೋ ಎಂಬ ವೈರಾಣಗಳಿಂದ ಹರಡುವ ಒಂದು ರೋಗವಾಗಿದೆ. ಪಿವಿ.1, ಪಿವಿ.2 ಮತ್ತು ಪಿವಿ.3 ಎಂಬ ವಿಧಗಳಿಂದ ವರ್ಗೀಕರಿಸಲಾಗಿದೆ. ಪೋಲಿಯೋ ವೈರಾಣುಗಳು ನೀರು, ಆಹಾರದ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಲೋಳೆಯಿಂದ ಬಾಯಿ, ಮೂಗು ಮೂಲಕ ಹರಡಬಹುದು. ಅಲ್ಲದೆ ಸೋಂಕು ಪೀಡಿತ ರೋಗಿಯ ಸಾಮಿಪ್ಯದಿಂದಲೂ ಹರಡಬಹುದಾಗಿದೆ. ಪೋಲಿಯೋ ವೈರಾಣುಗಳು ದೇಹಕ್ಕೆ ಪ್ರವೇಶವಾದ ಬಳಿಕ ರಕ್ತ, ರಕ್ತನಾಳಗಳ ಮೂಲಕ ಹರಡುತ್ತವೆ ಹಾಗೂ ಹೆಚ್ಚು ವೃದ್ದಿಸಲಾರಂಭಿಸುತ್ತದೆ. ವೈರಾಣು ದೇಹ ಸೇರಿದ ಬಳಿಕ ಸಾಮಾನ್ಯವಾಗಿ 7-14 ದಿನಗಳಲ್ಲಿ ಜ್ವರ, ಬಳಲಿಕೆ, ತಲೆನೋವು, ವಾಂತಿ ಹಾಗೂ ಕೈಕಾಲು ನೋವು ಕಾಣಿಸಲಾರಂಭಿಸುತ್ತದೆ. ಸೋಂಕಿನ ಪರಿಣಾಮ ಕನಿಷ್ಠ 200 ಪ್ರಕರಣಗಳಿಗೊಂದು ವಾಸಿ ಮಾಡಲು ಸಾಧ್ಯವಾಗದಂತೆ ಕಾಲುಗಳು ಸ್ವಾಧೀನತೆ ಕಳೆದುಕೊಳ್ಳಬಹುದು ಎಂದು ಪೋಲಿಯೋ ಹರಡುವ ಬಗೆಯನ್ನು ತಿಳಿಸಿದರು.

ಕಳೆದ ಬಾರಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದಲ್ಲಿ 1,27, 563 ಮಕ್ಕಳಿಗೆ ಲಸಿಕೆ ನೀಡಿ ಶೇ 106.35 ಸಾಧನೆ ಮಾಡಲಾಗಿದೆ. ಮಂಡ್ಯ- 32651, ಮದ್ದೂರು-19036, ಮಳವಳ್ಳಿ- 19682, ಪಾಂಡವಪುರ-12073,:ಶ್ರೀರಗಪಟ್ಟಣ,-11826, ಕೆ.ಆರ್ ಪೇಟೆ-17953 ಹಾಗೂ ನಾಗಮಂಗಲ-14342 ಮಕ್ಕಳಿಗೆ ಲಸಿಕೆ ನೀಡಲಾಗಿದೆ ಎಂದರು. ಪೋಲಿಯೋ ನಿರ್ಮೂಲನೆಯಲ್ಲಿ ಭಾರತ ಸರ್ಕಾರ, ರಾಜ್ಯ ಸರ್ಕಾರಗಳು, ಯುನಿಸೆಫ್, ವಿಶ್ವ ಆರೋಗ್ಯ ಸಂಸ್ಥೆ, ಪೋಲಿಯೋ ಕಣ್ಗಾವಲು ಯೋಜನೆ, ವಿಶ್ವಪೋಲಿಯ ನಿರ್ಮೂಲನ ಕಾರ್ಯಕ್ರಮ, ರೋಟರಿ ಇಂಟರ್ ನ್ಯಾಷನಲ್, ಯು.ಎಸ್. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ಹಾಗೂ ರೆಡ್ ಕ್ರಾಸ್ ಸಂಸ್ಥೆಗಳು ಭಾಗವಹಿಸಲಿವೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ ಎಂ. ಬಾಬು, ನಿವೃತ್ತ ಆರೋಗ್ಯಾಧಿಕಾರಿ ಡಾ. ಮರೀಗೌಡ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಸೋಮಶೇಖರ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಎಂ. ಎನ್. ಆಶಾಲತಾ, ಮಲೇರಿಯಾ ನಿಯಂತ್ರಣ ಅಧಿಕಾರಿ ಡಾ.ಕಾಂತರಾಜು, ಆರ್ ಸಿ.ಹೆಚ್ ಒ ಡಾ. ಅನಿಲ್ ಕುಮಾರ್, ದಂತ ವೈದ್ಯಾಧಿಕಾರಿ ಡಾ. ಅರುಣಾನಂದ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular