ಮೈಸೂರು: ಕರ್ನಾಟಕ ರಾಜ್ಯ ರೈತ ಸಂಘದಿಂದ ರೈತ ಮುಖಂಡ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಜನ್ಮದಿನದ ನೆನಪಿನಲ್ಲಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಫೆ.10ರಂದು ಬೆಳಿಗ್ಗೆ 11ಕ್ಕೆ ಬೃಹತ್ ರೈತ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಅತಿಥಿಗಳಾಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ಬಿ.ಆರ್.ಪಾಟಿಲ್, ದರ್ಶನ್ ಪುಟ್ಟಣ್ಣಯ್ಯ ಭಾಗವಹಿಸುವರು. ರೈತ ವಿರೋಧಿ ಶಾಸನಗಳು ಹಿಂತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ 38 ಪುಟದ ಕಿರುಹೊತ್ತಿಗೆ ಬಿಡುಗಡೆಗೊಳಿಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.
ಪ್ರಸ್ತುತ ದೇಶದಲ್ಲಿ ರೂಪುಗೊಂಡಿರುವ ಬಂಡವಾಳಶಾಹಿಪರ ನಿಲುವು, ದುಡಿಯುವ ವರ್ಗ ವಿರೋಧಿ ನೀತಿಗಳ ವಿರುದ್ಧ ಹೋರಾಡಲು ನಂಜುಂಡಸ್ವಾಮಿಯವರ ಚಿಂತನೆ, ಮಾರ್ಗ ದೊಡ್ಡ ಪ್ರೇರಣೆ. ಅವರ ಜನನವಾಗಿ 88 ವರ್ಷ ತುಂಬಲಿದ್ದು, ಅಂದು ರಾಜ್ಯ ಸರ್ಕಾರವನ್ನು ರೈತ ಪರ ಬಜೆಟ್ ಮಂಡಿಸುವಂತೆ ಒತ್ತಾಯಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಹೊಸಕೋಟೆ ಬಸವರಾಜ್, ತಾಲ್ಲೂಕು ಗೌರವಾಧ್ಯಕ್ಷ ನಾಗನಹಳ್ಳಿ ವಿಜೇಂದ್ರ, ರೈತ ಮುಖಂಡ ಬಿ.ಮರಂಕಯ್ಯ ಉಪಸ್ಥಿತರಿದ್ದರು.