ಚಾಮರಾಜನಗರ : ನಿರಾಮಯ ಆರೋಗ್ಯ ವಿಮಾ ಯೋಜನೆಯು ಬುದ್ದಿಮಾಂದ್ಯ, ಮೆದುಳು ಪಕ್ಷಘಾತ ಮಕ್ಕಳ ಪಾಲಿಗೆ ಸಂಜೀವಿನಿಯಾಗಿ ಪರಿಣಮಿಸಿದೆ ಎಂದು ಜಿಲ್ಲಾ ಪ್ರಧಾನ ಸೆಷೆನ್ಸ್ ನ್ಯಾಯಾಧೀಶರಾದ ಬಿ.ಎಸ್. ಭಾರತಿ ಅಭಿಪ್ರಾಯಪಟ್ಟರು.
ನಗರದ ಹಳೇ ಕೆ.ಡಿ.ಪಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಾಲಾ ಶಿಕ್ಷಣ ಇಲಾಖೆ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ, ಮೊಬಿಲಿಟಿ ಇಂಡಿಯಾ, ಸಖೀ ಒನ್‌ಸ್ಟಾಪ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಬುದ್ದಿಮಾಂದ್ಯ, ಮೆದುಳು ಪಕ್ಷಘಾತ ಮಕ್ಕಳ ದೈನಂದಿನ ಚಟುವಟಿಕೆಗಳ ನಿರ್ವಹಣೆ ಮತ್ತು ನಿರಾಮಯ ಆರೋಗ್ಯ ವಿಮೆ ಕುರಿತು ಪೊಷಕರಿಗೆ ಏರ್ಪಡಿಸಲಾಗಿದ್ದ ಮಾಹಿತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿ ಬುದ್ದಿಮಾಂದ್ಯ, ಮೆದುಳು ಪಕ್ಷಘಾತ ಮಕ್ಕಳು ಹಾಗೂ ಆಟಿಸಂ ಮಕ್ಕಳ ದೈನಂದಿನ ನಿರ್ವಹಣೆ ಪೊಷಕರಿಗೆ ಕಷ್ಟಸಾಧ್ಯವಾಗಿದೆ. ಕೆಲವರು ಮಕ್ಕಳನ್ನು ಮನೆಯಲ್ಲಿಯೇ ಕೂಡಿಹಾಕುವ ಪರಿಸ್ಥಿತಿ ನಮ್ಮ ಸಮಾಜದಲ್ಲಿದೆ. ಇದು ಸಲ್ಲದು. ಸಮಾಜದಲ್ಲಿನ ಪೂರ್ವಾಗ್ರಹ ಪೀಡಿತ ಸಮಸ್ಯೆಗಳಿಗೆ ಪರಿಹಾರಗಳನ್ನು ನಾವೆಲ್ಲರೂ ಕಂಡುಕೊಳ್ಳಬೇಕಾಗಿದೆ.
ಈ ನಿಟ್ಟಿನಲ್ಲಿ ವಿಕಲಚೇತನ ಮಕ್ಕಳ ಪುನಶ್ಚೇತನಕ್ಕಾಗಿ ಸರ್ಕಾರ ನಿರಾಮಯ ಆರೋಗ್ಯ ವಿಮಾ ಯೋಜನೆಯನ್ನು ಸಂಘಸಂಸ್ಥೆಗಳ ಮೂಲಕ ಜಾರಿಗೊಳಿಸಿದೆ. ಬುದ್ದಿಮಾಂದ್ಯ, ಮೆದುಳು ಪಕ್ಷಘಾತ ಮಕ್ಕಳ ದೈನಂದಿನ ನಿರ್ವಹಣೆಗಾಗಿ ನೆರವಾಗುವ ಸಲುವಾಗಿ ನಿರಾಮಯ ಆರೋಗ್ಯ ವಿಮಾ ಯೋಜನೆಯಡಿ ಒಂದು ಲಕ್ಷ ರೂ. ಗಳನ್ನು ಮಕ್ಕಳ ಪೊಷಕರಿಗೆ ಸರ್ಕಾರ ನೀಡಲಿದೆ. ಜನರಿಗೆ ಯೋಜನೆಯ ಅರಿವಿನ ಕೊರತೆಯಿದೆ. ಯೋಜನೆಯು ಜಿಲ್ಲೆಯ ಪ್ರತಿ ಗ್ರಾಮಗಳನ್ನು ತಲುಪಬೇಕು. ಯೋಜನೆಯ ಸದ್ಭಳಕೆಯಾಗಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಧಾನ ಕಾರ್ಯದರ್ಶಿ ಎಂ. ಶ್ರೀಧರ ಮಾತನಾಡಿ ಸಂವಿಧಾನದ ಆಶಯದಡಿ ಪ್ರತಿಯೊಬ್ಬರಿಗೂ ಸಮಾನ ಅವಕಾಶಗಳಿವೆ. ವಿಕಲಚೇತನರಿಗೂ ಸಮಾಜದಲ್ಲಿ ಎಲ್ಲರಂತೆ ಬದುಕುವ ಹಕ್ಕು ಇದೆ. ಬುದ್ದಿಮಾಂದ್ಯ ಮಕ್ಕಳ ದೈನಂದಿನ ನಿರ್ವಹಣೆ ಪೊಷಕರಿಗೆ ಸವಾಲಾಗಿದೆ. ಸರ್ಕಾರ ಇದನ್ನು ಮನಗಂಡು ವಿಕಲಚೇತನ ಮಕ್ಕಳ ಪುನರ್ವಸತಿಗಾಗಿ ಆರೋಗ್ಯ ವಿಮಾ ಯೋಜನೆ ರೂಪಿಸಿದೆ. ಯೋಜನೆಯ ಅರಿವನ್ನು ಹೆಚ್ಚು ಜನರಿಗೆ ತಲುಪಿಸಬೇಕು ಎಂದರು.
ಈ ಸಂದರ್ಭದಲ್ಲಿ ನಿರಾಮಯ ಆರೋಗ್ಯ ವಿಮಾ ಯೋಜನೆ ಕುರಿತು ಪೋಸ್ಟರ್ ಅನ್ನು ಗಣ್ಯರು ಬಿಡುಗಡೆಗೊಳಿಸಿದರು. ಯೋಜನೆಯ ಬಗ್ಗೆ ಕಿರುಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರು ನಿಮಾನ್ಸ್ ಆಸ್ಪತ್ರೆಯ ಎ.ಎಸ್. ಮಧು ಅವರು ‘ಬುದ್ದಿಮಾಂದ್ಯ, ಮೆದುಳು ಪಕ್ಷಘಾತ ಮಕ್ಕಳ ದೈನಂದಿನ ಚಟುವಟಿಕೆಗಳ ನಿರ್ವಹಣೆ ಮತ್ತು ನಿರಾಮಯ ಆರೋಗ್ಯ ವಿಮಾ ಯೋಜನೆ ಕುರಿತು ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕಿರಣ್ ಪಢ್ನೇಕರ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸುರೇಶ್, ಸಖೀ ಒನ್‌ಸ್ಟಾಪ್ ಸೆಂಟರ್ ಘಟಕ ಆಡಳಿತಾಧಿಕಾರಿ ಎಲ್. ಸೌಮ್ಯ, ಮೊಬಿಲಿಟಿ ಇಂಡಿಯಾದ ಜಿಲ್ಲಾ ಶಾಖೆಯ ರಾಜಣ್ಣ ಸೇರಿದಂತೆ ಇತರರು ಹಾಜರಿದ್ದರು.