ಮಂಡ್ಯ: ಕೆರಗೋಡು ಹನುಮ ಧ್ವಜ ಹಿನ್ನಲೆ ಇಂದು ಮಂಡ್ಯ ನಗರ ಹಾಗೂ ಕೆರಗೋಡು ಗ್ರಾಮ ಬಂದ್ ಗೆ ಶ್ರೀರಾಮ ಭಜನಾ ಮಂಡಳಿ, ವಿಶ್ವ ಹಿಂದೂ ಪರಿಷತ್, ಭಜರಂಗ ದಳ, ಭಜರಂಗ ಸೇನೆಯಿಂದ ಕರೆ ನೀಡಲಾಗಿದೆ.
ಬೆಳಿಗ್ಗೆ 7ಗಂಟೆಯಿಂದ ಸಂಜೆ 4 ಗಂಟೆವರೆಗೆ ಸ್ವಯಂ ಪ್ರೇರಿತ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಕರವೇ, ಲಾರಿ ಮಾಲೀಕರ ಸಂಘ, ಕೆಲವು ವರ್ತಕರು ಹಾಗೂ ಹೋಟೆಲ್ ಮಾಲೀಕರು ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಮತ್ತೊಂದೆಡೆ ಕೆರಗೋಡು ಗ್ರಾಮದಿಂದ ಮಂಡ್ಯದ ರೈಲ್ವೆ ನಿಲ್ದಾಣದ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ಬೈಕ್ ಜಾಥಾ ನಡೆಯಲಿದ್ದು, ಬಳಿಕ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಗುತ್ತದೆ.
ಮಂಡ್ಯ ನಗರ ರೈಲ್ವೆ ನಿಲ್ದಾಣದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಬಳಿ ಹಿಂದು ಕಾರ್ಯಕರ್ತರ ಜಮಾವಣೆಗೊಂಡಿದ್ದು, ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಜಾಥಾದಲ್ಲಿ ಪಾಲ್ಗೊಂಡರು.
ಹಿಂದೂ ಕಾರ್ಯಕರ್ತರ ಬೈಕ್ ಜಾಥಾ ಹಾಗೂ ಪಾದಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಆದರೆ ಬಿಜೆಪಿ ಬಂದ್ ಗೆ ಬೆಂಬಲ ನೀಡಿಲ್ಲ.
ಜೆಡಿಎಸ್ ತಟಸ್ಥ
ಹನಮ ಧ್ವಜ ಹೋರಾಟದಲ್ಲಿ ಜೆಡಿಎಸ್ ತಟಸ್ಥವಾಗಿದೆ. ಪ್ರತಿಭಟನೆಗೆ ಭಾಗವಹಿಸಬೇಕು ಅಥವಾ ಬೇಡ ರಾಜ್ಯ ನಾಯಕರು ಎಂದು ಸೂಚನೆ ನೀಡಿಲ್ಲ. ಈ ಕಾರಣದಿಂದಾಗಿ ಬಂದ್ ಹಾಗೂ ಬೈಕ್ ಜಾಥಾದಿಂದ ದಳಪತಿಗಳು ದೂರ ಉಳಿದಿದ್ದಾರೆ.
ಕೇಸರಿ ಶಾಲು ಹಾಕಿಕೊಂಡಿದ್ದು ತಪ್ಪು ಎಂಬ ದೇವೇಗೌಡರ ಹೇಳಿಕೆಯಿಂದಲೂ ಸಾಕಷ್ಟು ಗೊಂದಲ ಸೃಷ್ಠಿಯಾಗಿದೆ. ಗೊಂದಲದಿಂದಾಗಿ ಜಿಲ್ಲಾ ನಾಯಕರು ತಟಸ್ಥ ನಿಲುವು ತಾಳಿದ್ದಾರೆ.
ಹನುಮ ಧ್ವಜ ವಿಚಾರದಲ್ಲಿ ಜೆಡಿಎಸ್ ಹೋರಾಟ ಎರಡೇ ದಿನಕ್ಕೆ ಸೀಮಿತವಾಗಿತ್ತು. ಧ್ವಜ ಇಳಿಸಿದ ದಿನ ಹಾಗೂ ಪಾದಯಾತ್ರೆಯಲ್ಲಿ ಮಾತ್ರ ಜೆಡಿಎಸ್ ಭಾಗಿಯಾಗಿದ್ದು, ಬಳಿಕ ತಟಸ್ಥವಾಗಿ ಹೋರಾಟದಿಂದ ದೂರ ಸರಿದಿದ್ದರು. ಬಿಜೆಪಿ ಹೋರಾಟಕ್ಕೆ ಮಿತ್ರ ಪಕ್ಷದ ನಾಯಕರು ಬೆಂಬಲ ನೀಡಿರಲಿಲ್ಲ.
ಮಂಡ್ಯ ನಗರದಾದ್ಯಂತ ಪೊಲೀಸ್ ಹೈ ಅಲರ್ಟ್
ಹಿಂದೂ ಸಂಘಟನೆಗಳಿಂದ ಬಂದ್ ಕರೆ ಹಿನ್ನೆಲೆ ಮಂಡ್ಯ ನಗರದಾದ್ಯಂತ ಪೊಲೀಸ್ ಹೈ ಅಲರ್ಟ್ ಆಗಿದ್ದಾರೆ. 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, ಪ್ರಮುಖ ರಸ್ತೆ, ವೃತ್ತಗಳಲ್ಲಿ ಖಾಕಿ ಕಣ್ಗಾವಲು ಇರಲಿದೆ.
ಪ್ರತಿಭಟನಾಕಾರರು ಜಮಾವಣೆಗೊಳ್ಳುವ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ರೈಲ್ವೆ ನಿಲ್ದಾಣದ ಆಂಜನೇಯ ಸ್ವಾಮಿ ದೇವಸ್ಥಾನ, ಮಹಾವೀರ ವೃತ್ತ, ಸಂಜಯ ವೃತ್ತ, ಜಿಲ್ಲಾಧಿಕಾರಿ ಕಚೇರಿ ಬಳಿ ಪೊಲೀಸ್ ಭದ್ರತೆ ಹೆಚ್ಚಿರಲಿದೆ.
ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.