ಮೈಸೂರು ; ಕಾಡಾನೆ ದಾಳಿಗೆ ಅರಣ್ಯ ವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಬಲಿಯಾಗಿರುವ ಘಟನೆ ಬಂಡೀಪುರ ಅರಣ್ಯ ಪ್ರದೇಶದಲ್ಲಿ ನಿನ್ನೆ ನಡೆದಿದೆ. ಕೆಬ್ಬೆಪುರ ಹಾಡಿ ನಿವಾಸಿ ಬಿ. ರಾಜು(೩೮) ಮೃತ ದುರ್ದೈವಿ. ಮೊಳೆಯೂರು ವಿಭಾಗದ ಅರಣ್ಯ ಪ್ರದೇಶದಲ್ಲಿ ರಾಜು ಅರಣ್ಯ ವೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕೆಬ್ಬೆಪುರ ಹಾಡಿಯಿಂದ ಕಾಲ್ನಡಿಗೆಯ ಮೂಲಕ ಕೆಲಸಕ್ಕೆ ತೆರಳುತ್ತಿದ್ದ ರಾಜು ಅವರ ಮೇಲೆ ಕಾಡಾನೆ ದಾಳಿ ಮಾಡಿದ್ದು, ರಾಜು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ರಾಜುವಿನ ಮಗಳು ಮಧ್ಯಾಹ್ನ ಬಟ್ಟೆ ಒಗೆಯಲು ತೆರಳಿದಾಗ ಮೃತ ದೇಹ ಬಿದ್ದಿರುವುದನ್ನು ಗಮನಿಸಿದ್ದಾಳೆ. ಹಾಡಿಯ ಜನರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ರಾಜು ಮೃತ ದೇಹದ ಮುಂದೆ ಪ್ರತಿಭಟನೆ ನಡೆಸಿದರು.