ಮಂಗಳೂರು ದಕ್ಷಿಣ ಕನ್ನಡ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಮಂಗಳೂರಿನ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್‌ನ ವಿವಿಧ ೨೦ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಪ್ರತ್ಯೇಕ ಸಭೆ ಕರೆದು ಪಕ್ಷ ಸಂಘಟನೆ ಬಗ್ಗೆ ಸಮಾಲೋಚನೆ ನಡೆಸಿದರು.
ಸಭೆಯಲ್ಲಿ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, ಮಾಜಿ ಸಚಿವರಾದ ಬಿ. ರಮಾನಾಥ ರೈ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಜಿ.ಎ.ಬಾವ, ಮಿಥುನ್ ರೈ, ಇನಾಯತ್ ಅಲಿ, ಮಮತಾ ಗಟ್ಟಿ, ಕೃಪಾ ಆಳ್ವ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಸಾದ್‌ರಾಜ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡುವಂತಹ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರವಿದೆ. ಅದನ್ನು ಅಧಿಕಾರದಿಂದ ದೂರ ಮಾಡಲು ದೇಶಾದ್ಯಂತ ಕಾಂಗ್ರೆಸ್ ಜನಾಂದೋಲನ ರೂಪಿಸಿದೆ.
ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲೂ ಬಿಜೆಪಿಯ ವಿರುದ್ಧ ಸಂಘಟನಾ ತ್ಮಕ ಹೋರಾಟ ನಡೆಸಲು ನಿರ್ಧರಿಸಲಾಗಿದೆ. ಸರಕಾರಿ ಯೋಜನೆಗಳ ಸಹಿತ ಇತರ ಅಭಿವೃದ್ಧಿಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವಂತಹ ಜವಾಬ್ದಾರಿಯನ್ನು ಪಕ್ಷದ ಎಲ್ಲಾ ಮುಂಚೂಣಿ ಘಟಕಗಳ ನಾಯಕರಿಗೆ ನೀಡಲಾಗಿದೆ ಎಂದರು.