ಚಾಮರಾಜನಗರ: ರಾಷ್ಟ್ರಕವಿ, ಸಮನ್ವಯ ಕವಿ ಜಿ ಎಸ್ ಶಿವರುದ್ರಪ್ಪ ರವರು ಹಸ್ತಪ್ರತಿ ವಿಭಾಗವನ್ನು ಸ್ಥಾಪನೆ ಮಾಡಿ ಹಸ್ತಪ್ರತಿಗಳ ಸಂಗ್ರಹಣೆಯ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ರಾಷ್ಟ್ರಕವಿ ಡಾ. ಜಿಎಸ್ ಶಿವರುದ್ರಪ್ಪನವರ ಜನ್ಮದಿನ ಹಾಗೂ ಅವರ ಕೊಡುಗೆಗಳ ಬಗ್ಗೆ ಮಾತನಾಡುತ್ತ ಶಿವರುದ್ರಪ್ಪನವರು ಕವಿಗಳು, ವಿಮರ್ಶಕರು, ಸಂಶೋಧಕರು ,ನಾಟಕಕಾರರು ಹಾಗೂ ಪ್ರಾಧ್ಯಾಪಕರಾಗಿ ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ .ಅವರ ಭಾವಗೀತೆಗಳು ಜಗತ್ತಿನ ಎಲ್ಲೆಡೆ ಮನಸುರೆಗೊಂಡಿದೆ ಅವರ ಭಾವಗೀತೆಗಳ ಸೌಂದರ್ಯ ಪ್ರಜ್ಞೆ ,ಪ್ರಕೃತಿ ಚಿಂತನೆ, ಮರೆಯಲಾಗದು. ಸೌಂದರ್ಯ ಸಮೀಕ್ಷೆಯ ಮಹಾಪ್ರಬಂದಕೆ ಪಿ ಎಚ್ ಡಿ ಪಡೆದ ಶಿವರುದ್ರಪ್ಪನವರು ನೆನೆಯುವುದು ಕನ್ನಡಿಗರ ಕರ್ತವ್ಯ.
ಅವರ ಸಂಶೋಧಕ ಲೇಖನಗಳು, ನಾಟಕಗಳು ವಿಮರ್ಶೆಗಳು ಕನ್ನಡ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತವೆ. ವಿದ್ಯಾರ್ಥಿಗಳು ,ಯುವಕರು ಕನ್ನಡ ಸಾಹಿತ್ಯ ಪುಸ್ತಕಗಳನ್ನು ಅಧ್ಯಯನ ಮಾಡುವ ಮೂಲಕ ಕನ್ನಡ ಸಾಹಿತಿಗಳ ಕಾವ್ಯ ಪ್ರಜ್ಞೆ ,ಪ್ರಬಂಧ ಹಾಗೂ ಸಾಹಿತ್ಯದ ಭಾವ ಸೂಕ್ಷ್ಮತೆಗಳನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡಬೇಕಿದೆ. ಕನ್ನಡ ಸಾಹಿತ್ಯ ವಿಶ್ವಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕವಿಗಳು, ಹೋರಾಟಗಾರರು, ಸಾಹಿತಿಗಳ ಮೂಲಕ ನೀಡಿದೆ. ಸರ್ವರೂ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಬೇಕು ಎಂದು ಮನವಿ ಮಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಶಿವಲಿಂಗ ಮೂರ್ತಿ ಅವರು ಮಾತನಾಡಿ 2006ರಲ್ಲಿ ಕರ್ನಾಟಕ ಸರ್ಕಾರ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಪ್ರಶಸ್ತಿಯನ್ನು ನೀಡಿತು. ಅವರ ಎದೆ ತುಂಬಿ ಹಾಡಿದನು, ಎಲ್ಲೋ ಹುಡುಕಿದೆ, ಯಾವುದೀ ಪ್ರವಾಹ, ಆಕಾಶದ ನೀಲಿಯಲ್ಲಿ, ದೀಪ ವಿರದ ದಾರಿಯಲ್ಲಿ ಗೀತೆಗಳು ಕೇಳುಗರ ಹಳ್ಳಿ ಉತ್ಸಾಹ ಮತ್ತು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ ಶಿವರುದ್ರಪ್ಪನವರ ವ್ಯಕ್ತಿ ಪರಿಚಯವನ್ನು ತಿಳಿಸಿದರು.
ಗಾಯಕ ರವಿಚಂದ್ರಪ್ರಸಾದ್ ಶಿವರುದ್ರಪ್ಪನವರ ಗೀತೆಗಳನ್ನು ಹಾಡಿ ಗಮನ ಸೆಳೆದರು.
ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಚಾ ರಂ ಶ್ರೀನಿವಾಸ ಗೌಡ,ಕಿಶೋರ್ ಕುಮಾರ್ ವೀರಶೆಟ್ಟಿ, ಪಣ್ಯದಹುಂಡಿ ರಾಜು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.