ಪಿರಿಯಾಪಟ್ಟಣ: ವಿದ್ಯಾರ್ಥಿಗಳ ಸಾಧನೆಯ ಗುರಿಗೆ ಗುರುವಿನ ಪಾತ್ರ ಅಪಾರವಾದದ್ದು ಎಂದು ಬಿಇಒ ಬಸವರಾಜು ಹೇಳಿದರು.
ಪಟ್ಟಣದ ಪಾರಸ್ ಪೃಥ್ವಿ ಜ್ಯುವೆಲ್ಸ್ ನಲ್ಲಿ ನಡೆದ ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವಲ್ಲಿ
ಎಸ್ಎಸ್ಎಲ್ ಸಿ ಹಾಗೂ ದ್ವಿತೀಯ ಪಿಯುಸಿ ಫಲಿತಾಂಶ ಪ್ರಮುಖ ಘಟ್ಟವಾಗಿದೆ ಈ ನಿಟ್ಟಿನಲ್ಲಿ ನಿರಂತರ ಕಲಿಕೆಯೊಂದಿಗೆ ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಜೀವನ ಶುಭಕರವಾಗಿರಲಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಕಲಿಕೆಗೆ ಮತ್ತಷ್ಟು ಹೆಚ್ಚು ಒತ್ತು ನೀಡಿದ ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್ ರಾಮಚಂದ್ರ ಅವರು ಮಾತನಾಡಿ ಆಭರಣಗಳ ಮಾರಾಟ ಜೊತೆಗೆ ಸಾಮಾಜಿಕ ಕಳಕಳಿಯಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಸಹಕಾರ ನೀಡಿ ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗೌರವಿಸುತ್ತಿರುವ ಪಾರಸ್ ಪೃಥ್ವಿ ಸಂಸ್ಥೆ ಇತರರಿಗೆ ಮಾದರಿಯಾಗಿದೆ ಎಂದರು.
ಪಾರಸ್ ಪೃಥ್ವಿ ಮಳಿಗೆ ಪಿರಿಯಾಪಟ್ಟಣ ಶಾಖೆ ವ್ಯವಸ್ಥಾಪಕ ಗಣೇಶ್ ಅವರು ಮಾತನಾಡಿ ಸಂಸ್ಥೆಯ ವತಿಯಿಂದ ಆಭರಣ ಮಾರಾಟ ಜತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಿಕ್ಷಣ ಆರೋಗ್ಯ ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ಈ ವೇಳೆ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸೌಜನ್ಯ ಆರ್ ಗೌಡ, ಎಲ್.ಪಿ ಧನ್ಯ, ಕೆ.ಎಸ್ ವೇಣುಗೋಪಾಲ್, ಚಂದ್ರಕಲಾ, ಸಿಂಚನ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಕೆ.ಎಸ್ ದೀಪಿಕಾ,
ಪಿ.ಶೋಭಿತ, ಹೆಚ್.ಎಂ ದರ್ಶನ್, ವಾಣಿಜ್ಯ ವಿಭಾಗದಲ್ಲಿ ಪಿ.ಸಿ ದರ್ಶನ್, ಎಂ.ಎಂ ರಂಜಿತಾ, ಹೆಚ್.ಎಸ್ ಸಿಂಧು, ಕಲಾವಿಭಾಗದಲ್ಲಿ ಟಿ.ಆರ್ ಸುಶ್ಮಿತಾ, ಟಿ.ವಿ ವರ್ಷ, ಬಿ.ರಂಜಿತಾ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಅತಿ ಹೆಚ್ಚು ಅಂಕ ಪಡೆದ ಡಿಟಿಎಂಎನ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಮುರಳಿಕೃಷ್ಣ ಅವರನ್ನು ಗೌರವಿಸಲಾಯಿತು, ಪೋಷಕರಾದ ದಯಾನಂದ್ ಹಾಗೂ ಆರಕ್ಷಕ ಇಲಾಖೆ ಸಿಬ್ಬಂದಿ ಪ್ರಸನ್ನ ಮತ್ತು ವಿದ್ಯಾರ್ಥಿಗಳು ಅನಿಸಿಕೆ ಹಂಚಿಕೊಂಡರು.
ಈ ಸಂದರ್ಭ ಬಿಆರ್ ಸಿ ಶಿವರಾಜ್, ಬಳಕೆದಾರರ ಸಂಘದ ಅಧ್ಯಕ್ಷ ದೇವರಾಜ್, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಮೂರ್ತಿ, ಪೃಥ್ವಿ ಮಳಿಗೆ ಸಿಬ್ಬಂದಿ ರೇವತಿ, ಅಖಿಲ್ ಕುಮಾರ್, ಮಂಜುನಾಥ್, ಅಭಿ ಅರಸ್, ದಿಲೀಪ್ ಕುಮಾರ್, ದರ್ಶನ್, ರಜನಿ, ಮಣಿಕಂಠ, ಸುಲೋಚನಾ, ಶ್ರೀಧರ್ ಆಚಾರಿ ಇದ್ದರು.