ಶಂಶೀರ್ ಬುಡೋಳಿ, ರಾಜ್ಯಧರ್ಮ, ಮಂಗಳೂರು
ಮಂಗಳೂರು(ದಕ್ಷಿಣ ಕನ್ನಡ): ಇದು ಕಡಲನಗರಿ, ಸಮುದ್ರನಗರಿ. ಆದ್ರೆ ಇಲ್ಲಿ ನೀರಿಲ್ಲ ಅಂದ್ರೆ ನೀವು ನಂಬ್ತೀರಾ..? ಇಲ್ವಲ್ಲಾ..? ಆದ್ರೆ ನೀವು ನಂಬಲೇಬೇಕು. ಹೌದು. ಮೀನಿನನಗರಿಯಲ್ಲಿ ಬಿಸಿಲಿನ ತಾಪ ಉರಿತಾ ಇದ್ದು ನೀರಿಗಾಗಿ ಇಲ್ಲಿನ ಜನರು ಪರಿತಪಿಸುತ್ತಿದ್ದಾರೆ. ಈ ಕುರಿತ ಸ್ಪೆಷಲ್ ರಿಪೋರ್ಟ್ ಇಲ್ಲಿದೆ ನೋಡಿ..
ಬರಿದಾದ ನೀರಿನ ತೊಟ್ಟಿ… ಬಿರು ಬಿಸಿಲಿಗೆ ಮೀನಿನ ನಗರಿಯ ಜನರು ತತ್ತರ.. ಕಾರ್ಪೋರೇಟರ್ ನೇತೃತ್ವದಲ್ಲಿ ಸ್ಥಳೀಯರ ಪ್ರತಿಭಟನೆ… ಹೌದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಪರಿಣಾಮ ಮಂಗಳೂರು ನಗರದ ಹಲವು ಭಾಗಗಳಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಮಂಗಳೂರಿನ ಕೊಡಿಯಾಲ್‌ಬೈಲ್, ಕಾರ್‌ಸ್ಟ್ರೀಟ್ ಸುತ್ತಮುತ್ತಲಿನ ಭಾಗದ ಕೆಲ ನಾಗರಿಕರು ಸ್ಥಳೀಯ ಕಾರ್ಪೊರೇಟರ್ ನೇತೃತ್ವದಲ್ಲಿಂದು ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿ ಮೌನ ಧರಣಿ ನಡೆಸಿದ ಘಟನೆ ನಡೆಯಿತು.

ಕಾರ್ಪೊರೇಟರ್ ಪೂರ್ಣಿಮಾ ನೇತೃತ್ವದಲ್ಲಿ ಬೆಂದೂರ್‌ವೆಲ್‌ನ ಪಂಪ್‌ಹೌಸ್‌ಗೆ ಭೇಟಿ ನೀಡಿದ ನೊಂದ ಸ್ಥಳೀಯರು ಅಲ್ಲಿ ನೀರು ಪೂರೈಕೆಯ ಸಮಸ್ಯೆಯನ್ನು ಸಿಬ್ಬಂದಿಯಿಂದ ಅರಿತುಕೊಂಡರು. ಮಂಗಳೂರು ಮಹಾನಗರ ಪಾಲಿಕೆಯ ಪೈಪ್‌ಲೈನ್‌ನಿಂದ ನಮ್ಮ ಮನೆಗಳಿಗೆ ಪೂರೈಕೆಯಾಗುವ ನೀರು ಕಳೆದ ಐದು ದಿನಗಳಿಂದ ಅತ್ಯಲ್ಪವಾಗಿ ಬರುತ್ತಿದೆ. ಈ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ನೀಡಿದ್ದೇವೆ. ನಾಲ್ಕು ದಿನದ ಹಿಂದೆ ತುಂಬೆಯಲ್ಲಿ ಪೈಪ್ ದುರಸ್ತಿ ಕಾರ್ಯಕ್ಕಾಗಿ ನೀರು ಸ್ಥಗಿತಗೊಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು. ಬಳಿಕ ಒಂದು ದಿನದಲ್ಲಿ ರಿಪೇರಿಯೂ ಮಾಡಿದ್ದಾರೆ. ಆದರೆ ಮರುದಿನ ನಗರದ ಇನ್ನೊಂದು ಕಡೆ ಪೈಪ್ ಒಡೆದಿದೆ ಎಂದು ಹೇಳಿದುರಸ್ತಿ ಕಾರ್ಯ ಮುಂದುವರಿಸಲಾಯಿತು. ಆದರೆ ನೀರು ಪೂರೈಕೆ ಆರಂಭಿಸಿದರೂ ಮನೆಗಳಿಗೆ ನೀರು ಮಾತ್ರ ಸರಿಯಾಗಿ ಬರುತ್ತಿಲ್ಲ ಎಂದು ಕೊಡಿಯಾಲ್‌ಬೈಲ್ ನಿವಾಸಿ ಸತ್ಯನಾರಾಯಣ ಕಾಮತ್ ಹೇಳಿದರು.
ಇನ್ನು ನೋವು ತೋಡಿಕೊಂಡ ಕುದ್ರೋಳಿಯ ವಿದ್ಯಾ, ‘ನಮಗೆ ಕಳೆದ ಐದು ದಿನಗಳಿಂದ ನೀರಿಲ್ಲ. ನಮ್ಮ ಮನೆಯ ಬಳಿ ಬಾವಿಯೂ ಇಲ್ಲ. ದೂರದ ಮನೆಗಳಿಂದ ಬಾವಿ ನೀರನ್ನು ತರುತ್ತಿದ್ದೇವೆ. ಇಂದು ಸಂಜೆಯೊಳಗೆ ನೀರು ಪೂರೈಕೆ ಆಗುವುದಾಗಿ ಅಧಿಕಾರಿಗಳು ಹೇಳಿದ್ದಾರೆ’ ಎಂದು ಸ್ಥಳೀಯರಾದ ವಿದ್ಯಾ ತಿಳಿಸಿದರು.

ಇತ್ತ ನೋವು ತೋಡಿಕೊಂಡ ಸ್ಥಳೀಯರಾದ ಮದಲಕ್ಷ್ಮಿ ಎಸ್.ರೈ, ದುರಸ್ತಿಯ ಕಾರಣಕ್ಕೆ ನಾಲ್ಕೈದು ದಿನಗಳಿಂದ ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೈ ತೊಳೆಯಲೂ ನೀರಿಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಡು ಬಿಸಿಲಿನ ನರ್ತನ ಹೆಚ್ಚಾಗುತ್ತಿದ್ದು ಸಮುದ್ರದ ಊರಲ್ಲೇ ನೀರಿಲ್ಲದೇ ಜನರು ಕಂಗಲಾಗಿರೋದು ವಿಪರ್ಯಾಸ. ಕೂಡಲೇ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿ ಜನರ ನೆಮ್ಮದಿಯನ್ನು ಕಾಪಾಡಬೇಕಾಗಿದೆ.