ಮಂಗಳೂರು (ದಕ್ಷಿಣ ಕನ್ನಡ): ಕಾಶಿಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಬಾಲರಾಮನಿಗೆ ೭೦ ಲಕ್ಷ ರೂಪಾಯಿ ಮೌಲ್ಯದ ಸ್ವರ್ಣ ಪೀಠ ಪ್ರಭಾವಳಿಯನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯುತ್ತಿರುವ ಮಂಡಲೋತ್ಸವದಲ್ಲಿ ಬಾಲರಾಮನ ಉತ್ಸವ ಮೂರ್ತಿಗೆ ಸಮರ್ಪಿಸಲಾಯಿತು.
ಈ ಸ್ವರ್ಣ ಪೀಠ ಪ್ರಭಾವಳಿಗೆ ಕೋಟದ ಕಾಶಿಮಠದಲ್ಲಿ ಅದ್ದೂರಿ ಮೆರವಣಿಗೆ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಪೂರೈಸಿ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ್ ಕಾಮತ್ ಅವರಿಗೆ ಹಸ್ತಾಂತರಿಸುವ ಮೂಲಕ ಅಯೋಧ್ಯೆಗೆ ಕಳುಹಿಸಲಾಗಿತ್ತು.
ಮೊನ್ನೆಯಷ್ಟೇ ಕಾಶಿಮಠ ಸಂಸ್ಥಾನದ ವತಿಯಿಂದ ಅಯೋಧ್ಯೆಯ ಬಾಲರಾಮನಿಗೆ ಬೆಳ್ಳಿಯ ಪಲ್ಲಕ್ಕಿಯೂ ಸಮರ್ಪಣೆಯಾಗಿದ್ದು ಇಲ್ಲಿ ಗಮನಾರ್ಹ. ಇದು ನನ್ನ ಜೀವನದ ಪರಮ ಪವಿತ್ರ ಭಾಗ್ಯವಾಗಿದ್ದು ಪರಮಪೂಜ್ಯ ಗುರುಗಳ ಹಾಗೂ ಪ್ರಭು ಶ್ರೀರಾಮನ ಸೇವಾ ಕಾರ್ಯಕ್ಕಿಂತ ಮಿಗಿಲಾದುದು ಬೇರಾವುದೂ ಇಲ್ಲವೆಂದು ಶಾಸಕರು ಇದೇ ವೇಳೆ ಹೇಳಿದರು.