ಮಂಗಳೂರು ದಕ್ಷಿಣ ಕನ್ನಡ: ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಕೋಚಿಮುಲ್ ಉದ್ಯೋಗಿಗಳ ನೇಮಕಾತಿ ಪ್ರಕರಣದಲ್ಲಿ ಕೈಜೋಡಿಸಿದ ಮಂಗಳೂರು ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಬೇಕು, ಪರೀಕ್ಷಾಂಗ ಕುಲಸಚಿವರನ್ನು ಅಮಾನತುಗೊಳಿಸಬೇಕು ಹಾಗೂ ಪ್ರಭಾರ ಕುಲಪತಿ ರಾಜಿನಾಮೆ ನೀಡಬೇಕು, ರಾಜ್ಯ ಸರ್ಕಾರ ಕೂಡಲೇ ಕುಲಪತಿಗಳನ್ನು ನೇಮಿಸಬೇಕು ಎಂದು ಎಬಿವಿಪಿ ಮಂಗಳೂರು ಘಟಕ ಆಗ್ರಹಿಸಿದೆ.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀರಾಮ್ ಅಂಗೀರಸ, ಗೊಂದಲದ ಗೂಡಾಗಿರುವ ವಿವಿಯಲ್ಲಿ ಶೈಕ್ಷಣಿಕ ಚಟುವಟಿಕೆ ಸುಗಮವಾಗಿ ನಡೆಯಲು ಸರಕಾರ ಗಮನ ಹರಿಸದೇ ಇದ್ದರೆ ಮಂಗಳೂರು ವಿವಿ ವ್ಯಾಪ್ತಿಯ ಎಲ್ಲ ಕಾಲೇಜುಗಳನ್ನು ಸೇರಿಸಿ ವಿವಿ ಚಲೋ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕೋಚಿಮುಲ್ ಅವ್ಯವಹಾರಕ್ಕೆ ಸಂಬಂಧಿಸಿ ಜ.೧೮ರಂದು ಮಂಗಳೂರು ವಿವಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಉದ್ಯೋಗಿಗಳ ನೇಮಕಾತಿಗೆ ಪ್ರಶ್ನೆಪತ್ರಿಕೆ ಸಿದ್ಧತೆ, ಪರೀಕ್ಷೆ ಹಾಗೂ ಫಲಿತಾಂಶ ಪ್ರಕಟಣೆಯ ಜವಾಬ್ದಾರಿಯನ್ನು ಮಂಗಳೂರು ವಿವಿ ವಹಿಸಿಕೊಂಡಿತ್ತು ಎಂದರು.