ದೆಹಲಿ: ನಾಳೆ ರೈತರು ನೀಡಿರುವ ಪ್ರತಿಭಟನೆಯ ಕರೆ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಸೆಕ್ಷನ್ ೧೪೪ ಅನ್ನು ಜಾರಿಗೊಳಿಸಲಾಗಿದೆ ಎಂದು ದಿಲ್ಲಿ ಪೊಲೀಸ್ ಆಯುಕ್ತ ಸಂಜಯ್ ಅರೋರಾ ತಿಳಿಸಿದ್ದಾರೆ.
ದಿಲ್ಲಿಯಾದ್ಯಂತ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ ೧೪೪ರ ಅನ್ವಯ ದಿಲ್ಲಿಯಾದ್ಯಂತ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ. ದೊಡ್ಡ ಸಭೆಗಳಿಗೆ ನಿಷೇಧ ಹೇರಲಾಗಿದೆ ಎಂದು ಸಂಜಯ್ ಅರೋರಾ ಹೇಳಿದ್ದಾರೆ. ಕಾಂಕ್ರೀಟ್ ತಡೆಗೋಡೆಗಳು ಹಾಗೂ ನೆಲಕ್ಕೆ ಉಕ್ಕಿನ ಮೊಳೆಯನ್ನು ಹಾಸುವ ಮೂಲಕ ಪ್ರತಿಭಟನಾಕಾರರನ್ನು ಹೊತ್ತು ಬರುವ ವಾಹನಗಳು ನಗರವನ್ನು ಪ್ರವೇಶಿಸದಂತೆ ಕ್ರಮ ಕೈಗೊಳ್ಳಲಾಗಿದೆ.
೨೦೨೧ರಲ್ಲಿ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವಾಗ ಕೇಂದ್ರ ಸರಕಾರದೆದುರು ಮಂಡಿಸಿದ್ದ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾಯ್ದೆ ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ರೈತರ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಹುತೇಕ ಸಂಘಟನೆಗಳು ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿವೆ.