ಮಡಿಕೇರಿ: ಬೈಕ್, ಸ್ಕೂಟರ್ ನಡುವಿನ ಅಪಘಾತದಲ್ಲಿ, ಬೈಕ್ ಸವಾರ, ಯುವಕ ಧನಲ್ ಸುಬ್ಬಯ್ಯ (೨೪) ಎಂಬುವವರು ಆಸ್ಪತ್ರೆಯಲ್ಲಿ ಮೃತಪಡುವ ಮುನ್ನವೇ, ಸ್ಕೂಟರ್ ಸವಾರ, ಗಾಯಾಳು ಎಚ್.ಡಿ.ತಮ್ಮಯ್ಯ (೫೭) ಎಂಬುವವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಲೇರಿಯ ಕಾಂಡನಕೊಲ್ಲಿಯ ನಿವಾಸಿ, ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಸುಬ್ಬಯ್ಯ ಬೈಕ್‌ನಲ್ಲಿ ಶುಕ್ರವಾರ ಮಡಿಕೇರಿಯಿಂದ ತಮ್ಮೂರಿಗೆ ತೆರಳುತ್ತಿದ್ದಾಗ, ಚೈನ್‌ಗೇಟ್ ಬಳಿ ತಮ್ಮಯ್ಯ ಅವರ ಸ್ಕೂಟರ್ ಡಿಕ್ಕಿಯಾಗಿತ್ತು. ಸುಬ್ಬಯ್ಯ ತೀವ್ರವಾಗಿ ಗಾಯಗೊಂಡಿದ್ದರು. ತಮ್ಮಯ್ಯ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಸುಬ್ಬಯ್ಯ ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಿದುಳು ನಿಷ್ಕ್ರಿಯಗೊಂಡಿದ್ದು, ಚಿಕಿತ್ಸೆ ಸಾಧ್ಯವಿಲ್ಲ ಎಂದು ವೈದ್ಯರು ಕೈಚೆಲ್ಲಿದ್ದರು. ನಂತರ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಯುವಕ ಬದುಕುವುದಿಲ್ಲಎಂಬ ವಿಷಯ ತಿಳಿದ ತಮ್ಮಯ್ಯ ತಮ್ಮ ಮನೆಯಲ್ಲಿ ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಸುಬ್ಬಯ್ಯ ಅಂದೇ ಆಸ್ಪತ್ರೆಯಲ್ಲಿ ಮೃತಪಟ್ಟರು’ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದ ಪ್ರಕರಣ ಮಡಿಕೇರಿ ಸಂಚಾರ ಠಾಣೆಯಲ್ಲಿ, ಆತ್ಮಹತ್ಯೆ ಪ್ರಕರಣ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿದೆ.