ಹೊಸದಿಲ್ಲಿ : ಸ್ವಾಮಿನಾಥನ್ ಸಮಿತಿ ವರದಿ ಅನುಷ್ಠಾನ, ಸಾಲ ಮನ್ನಾ ಮತ್ತು ಎಂಎಸ್‌ಪಿ ಖಾತರಿ ಕಾನೂನು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ದೆಹಲಿ ದಿಗ್ಬಂಧನ ಎರಡನೇ ಆವೃತ್ತಿಯ ಪ್ರತಿಭಟನೆಯ ಕಾವು ತೀವ್ರಗೊಂಡಿದ್ದು, ಕೇಂದ್ರ ಸರ್ಕಾರ ರೈತರ ಪ್ರತಿಭಟನೆ ಹತ್ತಿಕ್ಕುವ ಎಲ್ಲ ಕಸರತ್ತುಗಳಿಗೆ ಮುಂದಾಗಿದೆ.
ಈ ನಡುವೆ ರೈತರು ದೆಹಲಿ ತಲುಪದಂತೆ ಎಲ್ಲೆಂದರಲ್ಲಿ ರೈತರನ್ನು ಬಂಧಿಸಲಾಗುತ್ತಿದೆ. ರಸ್ತೆಗಳನ್ನು ಅಗೆದು, ಮುಳ್ಳಿನ ತಂತಿಗಳನ್ನು ಹಾಕಲಾಗುತ್ತಿದೆ. ರಸ್ತೆಯಲ್ಲಿ ಬೃಹತ್ ಸಿಮೆಂಟ್ ಗೋಡೆಗಳ ನಿರ್ಮಾಣವಾಗುತ್ತಿದೆ. ಡ್ರೋಣ್ ಮೂಲಕವೂ ರೈತರ ಮೇಲೆ ದಾಳಿ ನಡೆಸಲಾಗುತ್ತಿದೆ.
ರೈತರ ಮೇಲೆ ದಾಳಿ ನಾಚಿಕೆಗೇಡು: ನವದೆಹಲಿ: ರೈತರು ಯಾವುದೂ ಹೊಸ ಬೇಡಿಕೆಯನ್ನಿಟ್ಟು ಪ್ರತಿಭಟನೆ ನಡೆಸುತ್ತಿಲ್ಲ, ಈ ಹಿಂದೆ ಸರ್ಕಾರ ಈಡೇರಿಸುವ ಭರವಸೆ ನೀಡಿ ಅದನ್ನು ಮಾಡಿಲ್ಲದಿರುವುದರಿಂದಲೇ ರೈತರ ಮತ್ತೆ ಬೀದಿಗಿಳಿದಿದ್ದು, ಧರಣಿ ನಿರತ ರೈತರ ಮೇಲಿನ ಮೋದಿ ಸರ್ಕಾರದ ದಾಳಿ ನಾಚಿಕೆಗೇಡು ಎಂದು ರೈತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಇತ್ತ ರೈತ ನಾಯಕ ರಾಕೇಶ್ ಟಿಕಾಯತ್ ನೇತೃತ್ವದ ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಸರ್ಕಾರ ರೈತ ಸಂಘಟನೆಗಳ ನಡುವೆ ಒಡಕು ಮೂಡಿಸಲು ಯತ್ನಿಸುತ್ತಿದೆ. ಈಗ ರೈತರು ಕೇಳುತ್ತಿರುವುದು ಯಾವುದೂ ಹೊಸ ಬೇಡಿಕೆಗಳಲ್ಲ. ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ಸರ್ಕಾರ ಈಡೇರಿಸುತ್ತೇವೆ ಎಂದು ಈ ವರೆಗೂ ಈಡೇರಿಸದ ಬೇಡಿಕೆಗಳಾಗಿವೆ ಎಂದು ಹೇಳಿದೆ.
ಇದೇ ವೇಳೆ ರೈತ ಮುಖಂಡ ರಾಕೇಶ್ ಟಿಕಾಯತ್ ಮಾತನಾಡಿ, ಸ್ವಾಮಿನಾಥನ್ ಸಮಿತಿ ವರದಿ ಅನುಷ್ಠಾನ ಮತ್ತು ಸಾಲ ಮನ್ನಾ ಎಲ್ಲಾ ರೈತರ ಕಾಳಜಿ ಮತ್ತು ಈ ಸಮಸ್ಯೆಗಳನ್ನು ಮುಂದಿಟ್ಟುಕೊಂಡು `ದೆಹಲಿ ಚಲೋ’ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ನೀಡುತ್ತೇವೆ.
ಎಂಎಸ್‌ಪಿ ಖಾತರಿ ಕಾನೂನು ಮತ್ತು ಸ್ವಾಮಿನಾಥನ್ ಸಮಿತಿ ವರದಿ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ಸಾಲ ಮನ್ನಾ ದೇಶಾದ್ಯಂತ ರೈತರ ಸಮಸ್ಯೆಗಳು. ಹಲವಾರು ರೈತ ಸಂಘಟನೆಗಳಿವೆ ಮತ್ತು ಅವರ ಸಮಸ್ಯೆಗಳು ವಿಭಿನ್ನವಾಗಿವೆ. ದೆಹಲಿಯತ್ತ ಪಾದಯಾತ್ರೆ ಮಾಡುತ್ತಿರುವ ಈ ರೈತರಿಗೆ ಸರ್ಕಾರ ಸಮಸ್ಯೆ ಸೃಷ್ಟಿಸಿದರೆ ನಾವು ಅವರಿಗೆ ಬೆಂಬಲ ನೀಡುತ್ತೇವೆ. ನಾವು ಅವರಿಂದ ದೂರವಿಲ್ಲ, ನಾವು ಅವರ ಬೆಂಬಲದಲ್ಲಿದ್ದೇವೆ ಎಂದು ಟಿಕಾಯತ್ ಹೇಳಿದ್ದಾರೆ.