Tuesday, April 22, 2025
Google search engine

Homeರಾಜ್ಯಏಪ್ರಿಲ್ 1 ರಿಂದ ಪಡಿತರ ಚೀಟಿ ವಿತರಣೆ: ಸಚಿವ ಕೆ.ಹೆಚ್. ಮುನಿಯಪ್ಪ

ಏಪ್ರಿಲ್ 1 ರಿಂದ ಪಡಿತರ ಚೀಟಿ ವಿತರಣೆ: ಸಚಿವ ಕೆ.ಹೆಚ್. ಮುನಿಯಪ್ಪ

ಬೆಂಗಳೂರು: ಪಡಿತರ ಚೀಟಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ 31 ರೊಳಗೆ ಪರಿಶೀಲನೆ ನಡೆಸಿ ಏಪ್ರಿಲ್ 1 ರಿಂದ ವಿತರಣೆ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಹೇಳಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆ ಶಾಸಕಿ ನಯನಾ ಮೋಟಮ್ಮ ಮತ್ತು ವಿಪಕ್ಷ ನಾಯಕ ಆರ್. ಅಶೋಕ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಶಾಸಕಿ ನಯನ ಮೋಟಮ್ಮ, ಬಿಪಿಎಲ್ ಕಾರ್ಡ್​ ಅರ್ಜಿ ಸಲ್ಲಿಕೆ ವೇಳೆ ತಾಂತ್ರಿಕ ಸಮಸ್ಯೆಯಾಗುತ್ತಿದೆ. ಹಲವರ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿಲ್ಲ. ಇದರಿಂದ ಐದು ಕೆಜಿಯ ಅಕ್ಕಿಯ ಹಣ ಹಲವು ಫಲಾನುಭವಿಗಳಿಗೆ ಕೆಲವು ತಿಂಗಳಿಂದ ತಲುಪುತ್ತಿಲ್ಲ. ಈ ಹಣ ಇಂತಹ ಫಲಾನುಭವಿಗಳಿಗೆ ಕೊಡುತ್ತಿದ್ದೀರಾ? ಇಲ್ವಾ? ಎಂದು ಪ್ರಶ್ನಿಸಿದರು.

ವಿಪಕ್ಷ ನಾಯಕ ಆರ್. ಅಶೋಕ್, ಬಿಪಿಎಲ್ ಕಾರ್ಡ್ ಕೊಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಸರ್ವರ್ ಡೌನ್ ಅದೂ ಇದೂ ಸಮಸ್ಯೆ ಅಂತ ಹೇಳುತ್ತಿದ್ದೀರಿ. ಐದು ಗ್ಯಾರಂಟಿಗಳಿಗೆ ಜನರ ಸಂಖ್ಯೆ ಹೆಚ್ಚಾಗಬಾರದು ಅಂತ ಬಿಪಿಎಲ್ ಕಾರ್ಡ್ ಕೊಡುತ್ತಿಲ್ವಾ? ಇದುವರೆಗೆ ಎಷ್ಟು ಬಿಪಿಎಲ್ ಕೊಟ್ಟಿದ್ದೀರಿ ತಿಳಿಸಿ ಎಂದರು. ಈ ಮಧ್ಯೆ ಬಿಪಿಎಲ್ ಕಾರ್ಡ್​ಗಳಿಲ್ಲದೇ ಆರೋಗ್ಯ ಚಿಕಿತ್ಸೆಗೂ ಕಷ್ಟ ಆಗುತ್ತಿದೆ, ಅರ್ಹರಿಗೆ ಬಿಪಿಎಲ್ ಕಾರ್ಡ್ ವಿತರಿಸಿ ಅಂತ ಉಳಿದ ಸದಸ್ಯರಿಂದ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವ ಕೆ.ಹೆಚ್. ಮುನಿಯಪ್ಪ, ವಿಧಾಸಭೆ ಚುನಾವಣೆ ಬಂತು ಅಂತ ಹಿಂದಿನ ಸರ್ಕಾರ 2.95 ಲಕ್ಷ ಕಾರ್ಡ್​ಗಳನ್ನು ವಿತರಿಸದೆ ಬಾಕಿ ಉಳಿಸಿಕೊಂಡಿತ್ತು. ಆದರೆ ನಾವು ಇಲ್ಲಿಯವರೆಗೆ 57 ಸಾವಿರ ಹೊಸ ಕಾರ್ಡ್ ವಿತರಿಸಿದ್ದೇವೆ. ಆರೋಗ್ಯ ಚಿಕಿತ್ಸೆಗಾಗಿ ಅರ್ಜಿ ಸಲ್ಲಿಸಿದವರಿಗೆ ತಕ್ಷಣ ಕಾರ್ಡ್ ವಿತರಿಸಲು ಸೂಚಿಸಿದ್ದೇವೆ. ಆರೋಗ್ಯ ತುರ್ತು ಕಾರಣಕ್ಕೆ 744 ಜನರಿಗೆ ಬಿಪಿಎಲ್ ಕಾರ್ಡ್ ಕೊಟ್ಟಿದ್ದೇವೆ. ಮುಂದಿನ ಮಾರ್ಚ್ 31 ರೊಳಗೆ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್​​​ಗಳನ್ನು ವಿತರಿಸುವ ತೀರ್ಮಾನ ಕೈಗೊಂಡಿದ್ದೇವೆ. ಇದರ ಆದೇಶ ಹೊರಡಿಸಲಾಗಿದೆ. ಈ ಕೆಲಸ ಮುಗಿದ ನಂತರ ಹೊಸ ಬಿಪಿಎಲ್ ಕಾರ್ಡ್​ ಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಶಾಸಕಿ ನಯನಾ ಮೋಟಮ್ಮ, ತಾಂತ್ರಿಕ ದೋಷದಿಂದ 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ಇದಕ್ಕೆ ಸಚಿವ ಕೆ.ಹೆಚ್. ಮುನಿಯಪ್ಪ ಪ್ರತಿಕ್ರಿಯಿಸಿ, ಇನ್ನು 5 ಕೆಜಿ ಅಕ್ಕಿಯ ಹಣ ಬರದವರಿಗೆ ಅರಿಯರ್ಸ್ ಕೊಡುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಆದರೆ 100ಕ್ಕೆ 90ರಷ್ಟು ಪಡಿತರ ಕಾರ್ಡ್‌ದಾರರಿಗೆ ಐದು ಕೆಜಿ ಅಕ್ಕಿಯ ಹಣ ಕೊಟ್ಟಿದ್ದೇವೆ. ಶೇ 5 ರಷ್ಟು ಏರುಪೇರು ಇದರಲ್ಲಿ ಇದೆ, ಅದನ್ನೂ ಸರಿಪಡಿಸುತ್ತೇವೆ. ಹೊಸ ಕಾರ್ಡ್​ಗಳಿಗೆ ಅರ್ಜಿ ಬಂದರೆ ತಡ ಮಾಡದೆ ಒಂದು ವಾರದೊಳಗೆ ಕಾರ್ಡ್ ವಿತರಣೆ ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಸದನಕ್ಕೆ ಮಾಹಿತಿ ನೀಡಿದರು.

RELATED ARTICLES
- Advertisment -
Google search engine

Most Popular