ಕೊಳ್ಳೇಗಾಲ : ನಗರದ ಹೊರ ವಲಯದ ಕೊಳ್ಳೇಗಾಲ-ಮಳವಳ್ಳಿ ಮುಖ್ಯ ರಸ್ತೆಯ ಮಧುವನಹಳ್ಳಿ ಬೈಪಾಸ್ ಬಳಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಲಾರಿಯಲ್ಲಿ ೨೨೧ ಕೆಜಿ ಒಣ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಬಂಧಿಸಿದ್ದಾರೆ.
ಲಾರಿಯಲ್ಲಿ ಪ್ಲೈವುಡ್ ಶೀಟುಗಳ ನಡುವೆ ಒಣ ಗಾಂಜಾದ ನಾಲ್ಕು ಚೀಲಗಳನ್ನು ಇರಿಸಿ ಸಾಗಣೆ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ದಾವಣಗೆರೆಯ ರವಿಕುಮಾರ್, ಯಾದಗಿರಿಯ ಉಮಾಶಂಕರ್, ಹರಿಹರದ ವಿನಾಯಕ ಹಾಗೂ ಜಿಲ್ಲೆಯ ಹನೂರು ತಾಲ್ಲೂಕಿನ ಸೆಂದಿಲ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ೧.೧೦ ಕೋಟಿ ಮೌಲ್ಯದ ೨೨೧ ಕೆಜಿ ಒಣ ಗಾಂಜಾ, ೨೫ ಲಕ್ಷ ಮೌಲ್ಯದ ಲಾರಿ, ೯ ಲಕ್ಷ ಮೌಲ್ಯದ ಪ್ಲೈವುಡ್ ಶೀಟುಗಳನ್ನು ವಶಕ್ಕೆ ಪಡೆದಿದ್ದಾರೆ. ಒಣ ಗಾಂಜಾವನ್ನು ಆಂಧ್ರಪ್ರದೇಶದಿಂದ ತರಲಾಯಿತು. ಜಿಲ್ಲೆ ಕೊಳ್ಳೇಗಾಲ ರಾಮನ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಹೋಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಲಾಗಿದೆ.
ಮಾದಕ ದ್ರವ್ಯ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಕಾರ್ಯಾಚರಣೆಯ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಒಣ ಗಾಂಜಾ ಸಿಕ್ಕಿದೆ. ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದ್ದು, ಎಲ್ಲಿಂದ ತರಲಾಗಿತ್ತು ಎಲ್ಲಿಗೆ ಕೊಂಡೊಯ್ಯಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ತಿಳಿಸಿದರು.