ಮಂಡ್ಯ : ಕ್ಷುಲ್ಲಕ ಕಾರಣಕ್ಕಾಗಿ ಮಹಿಳೆಯೊಬ್ಬರನ್ನು ಠಾಣೆಗೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಯ್ಯನ್ ಗೌಡ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಹಸುಗಳನ್ನು ರಸ್ತೆಗೆ ಕಟ್ಟುತ್ತಾರೆ ಎಂದು ನನ್ನ ಮಗಳು ರೂಪಾ ಅವರನ್ನು ಠಾಣೆಗೆ ಕರೆತಂದು ಹಲ್ಲೆ ಮಾಡಿದ್ದಾರೆಂದು ಅವರ ತಾಯಿ ಗೌರಮ್ಮ ಸಬ್ ಇನ್ಸ್‌ಪೆಕ್ಟರ್ ಅಯ್ಯನ ಗೌಡ ಅವರ ಮೇಲೆ ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾದ ಹಿನ್ನಲೆಯಲ್ಲಿ ಎಸ್ಪಿ ಎನ್.ಯತೀಶ್ ಅಮಾನತು ಮಾಡಿದ್ದಾರೆ.
ಅಶೋಕ ನಗರದ ರೂಪ ಎಂಬ ಮಹಿಳೆಯನ್ನು ಠಾಣೆಗೆ ಕರೆದೊಯ್ದ ಅಯ್ಯನ ಗೌಡ ಅವರ ಮೇಲೆ ಮನಸೋ ಇಚ್ಚೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ರೂಪಾ ಅವರ ಮೇಲೆ ದೌರ್ಜನ್ಯ ಎಸಗಿರುವ ಅಯ್ಯನಗೌಡ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ವಿವಿಧ ಪ್ರಗತಿಪರ ಮಹಿಳಾ ಸಂಘಟನೆಗಳು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳನ್ನು ಆಗ್ರಹಿಸಿದ್ದರು.
ಮನೆಯ ಮುಂದೆ ಹಸು ಕಟ್ಟಿದ್ದ ಕಾರಣವನ್ನು ನೆಪವಾಗಿಟ್ಟುಕೊಂಡು ಅಶೋಕ ನಗರ ನಿವಾಸಿ ರೂಪಾ ಅವರನ್ನು ಬಲವಂತವಾಗಿ ಜೀಪಿಗೆ ಹತ್ತಿಸಿಕೊಂಡ ಸಬ್ ಇನ್ಸ್‌ಪೆಕ್ಟರ್ ಅಯ್ಯನ ಗೌಡ ಠಾಣೆಗೆ ಕರೆತಂದು ಅವಾಚ್ಯ ಶಬ್ದಗಳಿಂದ ಬೈದು ಬೆಲ್ಟ್ ಹಾಗೂ ಲಾಠಿಯಿಂದ ಥಳಿಸಿದ್ದರು. ರೂಪಾ ಅವರನ್ನು ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಮಹಿಳಾ ಪೇದೆಗಳಿರಲಿಲ್ಲ. ಪುರುಷ ಪೇದೆಗಳೊಂದಿಗೆ ಅಯ್ಯನಗೌಡ ರೂಪಾ ಅವರನ್ನು ಬಲವಂತವಾಗಿ ಠಾಣೆಗೆ ಕರೆದುಕೊಂಡು ಬಂದ ನಂತರ ಒಂದು ಕೋಣೆಯೊಳಗೆ ಲಾಕ್ ಮಾಡಿ ಕೊಂಡು ಮಹಿಳಾ ಪೇದೆಯೂ ಒಳಗೊಂಡಂತೆ ಪುರುಷ ಪೇದೆಗಳ ಜೊತೆ ಸೇರಿ ರೂಪಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ.
ಇದು ಅಕ್ಷಮ್ಯ. ಒಬ್ಬ ಮಹಿಳೆಯನ್ನು ಯಾವುದೇ ದೂರು ಇಲ್ಲದಿದ್ದರೂ ಬಲವಂತವಾಗಿ ಠಾಣೆಗೆ ಕರೆತಂದು ಮುಖ, ಮೂತಿ ನೋಡದೆ ಮನಸೋ ಇಚ್ಛೆ ಥಳಿಸಿರುವುದಕ್ಕೆ ರೂಪಾ ಅವರ ಮೈ ಮೇಲಿನ ಗಾಯಗಳೇ ಸಾಕ್ಷಿಯಾಗಿದೆ ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಅಯ್ಯನಗೌಡ ಅವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದರು. ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ ಅವರು ಈ ಹಿಂದೆ ಬೆಸಗರಹಳ್ಳಿ, ಪಾಂಡವಪುರ, ಕೆ.ಎಂ. ದೊಡ್ಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ದರ್ಪ, ದೌರ್ಜನ್ಯದಿಂದ ವರ್ತಿಸಿದ ಹಿನ್ನಲೆಯಲ್ಲಿ ರೈತರು, ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಪಾಂಡವಪುರ ಠಾಣೆಯಲ್ಲಿದ್ದಾಗ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ರೈತರು ಅಯ್ಯನ ಗೌಡ ವಿರುದ್ಧ ಘೇರಾವ್ ಮಾಡಿದ್ದರು.
ಹೀಗೆ ತಾವು ಕೆಲಸ ಮಾಡಿದ ಠಾಣೆಯಲ್ಲಿದ್ದಾಗಲೆಲ್ಲ ಒಂದಲ್ಲಾ ಒಂದು ರೀತಿ ದೌರ್ಜನ್ಯದಿಂದ ನಡೆದುಕೊಂಡಿರುವ ಇತಿಹಾಸ ಇರುವ ಅಯ್ಯನಗೌಡ ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಸೇವೆಯಿಂದಲೇ ವಜಾ ಮಾಡಬೇಕೆಂದು ವಿವಿಧ ಸಂಘಟನೆಗಳ ಮುಖಂಡರು ಎಸ್ಪಿ ಎನ್. ಯತೀಶ್ ಅವರಿಗೆ ಮನವಿ ಮಾಡಿದ್ದಾರೆ.