ಬಳ್ಳಾರಿ: ಜಿಲ್ಲೆ, ಕಂಪ್ಲಿ ತಾಲೂಕಿನ ಎಮ್ಮಿಗನೂರು, ನೆಲ್ಲುಡಿ ಹಾಗೂ ಸಣಾಪುರ ಗ್ರಾಮ ಹಾಗೂ ಕಂಪ್ಲಿ ಪಟ್ಟಣಗಳಲ್ಲಿ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸಂಚಾರದ ವೇಳೆ ಸಂವಿಧಾನದ ಆಶಯ ಮತ್ತು ಮೌಲ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಸಂವಿಧಾನ ರಚನಾ ಸಭೆ ಹಾಗೂ ಸಂವಿಧಾನ ಕುರಿತ ವಿಡಿಯೋ ತುಣುಕುಗಳನ್ನು ಸಾರ್ವಜನಿಕರಿಗೆ ಪ್ರಸ್ತುತಪಡಿಸಲಾಯಿತು. ಸಾಂವಿಧಾನಿಕ ಪ್ರಸ್ತಾವನೆಯ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಮೂಲಕ ಸಾಂವಿಧಾನಿಕ ಪ್ರಸ್ತಾವನೆ ಪ್ರತಿಗಳನ್ನು ಉದ್ದಕ್ಕೂ ವಿತರಿಸಲಾಯಿತು.
ಮೊದಲಿಗೆ ಎಮ್ಮಿಗನೂರು ಗ್ರಾಮದಲ್ಲಿ ಸ್ವಾಗತಿಸಲಾಯಿತು. ಕಂಪ್ಲಿ ತಾಲೂಕಿನ ತಹಸೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಭಾಗವಹಿಸಿದ್ದರು. ಎಮ್ಮಿಗನೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ೫೦ ಮೀಟರ್ ಉದ್ದದ ರಾಷ್ಟ್ರಧ್ವಜ ಹಿಡಿದು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆರ್.ಕೆ.ಶ್ರೀಕುಮಾರ್, ಕಂಪ್ಲಿ ಪುರಸಭೆ ಮುಖ್ಯಾಧಿಕಾರಿ ದುರ್ಗಣ್ಣ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಕಂಪ್ಲಿ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು, ಕಂಪ್ಲಿ ತಾಲೂಕಿನ ನಾನಾ ಶಾಲಾ ಮುಖ್ಯ ಶಿಕ್ಷಕರು, ಕಂಪ್ಲಿ ತಾಲೂಕಿನ ನಾನಾ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.