ಬೆಂಗಳೂರು: ಫೆ.೨೭ ರಂದು ನಡೆಯುವ ರಾಜ್ಯಸಭೆಯ ಚುನಾವಣೆಗೆ ಐದನೇ ಅಭ್ಯರ್ಥಿಯಾಗಿ ಜೆಡಿಎಸ್‌ನ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದರು. ಈಗಿರುವ ವಿವಿಧ ಪಕ್ಷಗಳ ಬಲಾಬಲದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳು ಮತ್ತು ಬಿಜೆಪಿ ಒಂದು ಸ್ಥಾನವನ್ನು ಅನಾಯಾಸವಾಗಿ ಗೆದ್ದುಕೊಳ್ಳಲು ಸಾಧ್ಯವಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ತೀರ್ಮಾನಿಸಿರುವ ಮಿತ್ರ ಪಕ್ಷಗಳು ಐದನೇ ಅಭ್ಯರ್ಥಿಯನ್ನಾಗಿ ಕುಪೇಂದ್ರ ರೆಡ್ಡಿಯವರನ್ನು ಕಣಕ್ಕೆ ಇಳಿಸುವ ಮೂಲಕ ಕಾಂಗ್ರೆಸ್ ಪಾಳೆಯದಲ್ಲಿ ತಲ್ಲಣ ಮೂಡಿಸಿವೆ.
ಕಾಂಗ್ರೆಸ್‌ಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಕಾಂಗ್ರೆಸ್ ೧೩೫ ಶಾಸಕರ ಬಲವನ್ನು ಹೊಂದಿದೆ. ಬಿಜೆಪಿ ೬೬, ಜೆಡಿಎಸ್ ೧೯, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜನಾರ್ದನ ರೆಡ್ಡಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯ ಮತ್ತು ಪಕ್ಷೇತರರಾದ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮತ್ತು ಗೌರಿಬಿದನೂರು ಶಾಸಕ ಕೆ.ಪಿ.ಪುಟ್ಟಸ್ವಾಮಿ ಇದ್ದಾರೆ. ದರ್ಶನ್, ಲತಾ, ಪುಟ್ಟಸ್ವಾಮಿ ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದಾರೆ.
ಜನಾರ್ದನ ರೆಡ್ಡಿ ಸಹ ಆರಂಭದಲ್ಲಿ ಕಾಂಗ್ರೆಸ್ ಜತೆಗಿರುವುದಾಗಿ ಹೇಳಿದ್ದರು. ಇತ್ತೀಚೆಗೆ, ಬಿಜೆಪಿ ಕಡೆ ಒಲವು ತೋರಿದ್ದಾರೆ. ಒಬ್ಬ ಅಭ್ಯರ್ಥಿಯ ಗೆಲುವಿಗೆ ೪೫ ಮತಗಳು ಬೇಕಾಗುತ್ತದೆ. ಮೈತ್ರಿಕೂಟದ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಬಿಜೆಪಿಯ ೨೧ ಹೆಚ್ಚುವರಿ ಮತಗಳು, ಜೆಡಿಎಸ್‌ನ ೧೯, ಪಕ್ಷೇತರ ೨ ಮತ್ತು ಕೆಆರ್‌ಪಿಪಿ, ಸರ್ವೋದಯ ಕರ್ನಾಟಕದ ತಲಾ ಒಂದು ಮತಗಳನ್ನು ಪಡೆಯಲು ಸಾಧ್ಯವಾದರೆ ೪೪ ಮತಗಳನ್ನು ಪಡೆಯಬಹುದು. ಅಲ್ಲದೇ, ಕಾಂಗ್ರೆಸ್‌ನಲ್ಲಿರುವ ಅಸಮಾಧಾನಿತರಿಗೆ ಗಾಳ ಹಾಕಿ ಇನ್ನೂ ಎರಡು ಅಥವಾ ಮೂರು ಶಾಸಕರಿಂದ ಅಡ್ಡ ಮತದಾನ ಮಾಡಿಸಿದರೆ ಗೆಲುವು ಸಾಧ್ಯ ಎಂಬ ಲೆಕ್ಕಾಚಾರ ನಡೆದಿದೆ.