ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಕೆಸ್ತೂರುಗೇಟ್ ಬಳಿ ಇರುವ ಕಾವೇರಿ ನದಿಯಿಂದ ೧೦ಕ್ಕೂ ಹೆಚ್ಚು ಗ್ರಾಮಗಳ ಕೆರೆಗಳಿಗೆ ಏತನೀರಾವರಿಯ ಮೂಲಕ ನೀರು ತುಂಬಿಸುವ ಕಾಮಗಾರಿ ಅನುಷ್ಠಾನಗೊಳಿಸಲು ರಾಜ್ಯ ಬಜೆಟ್‌ನಲ್ಲಿ ೫೦ ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದ್ದಾರೆ.
ಕೆಸ್ತೂರುಗೇಟ್, ಕೆಸ್ತೂರು, ಕೆಸ್ತೂರುಕೊಪ್ಪಲು, ಮಳಲಿ, ಮಾವತ್ತೂರು, ಕಂಚುಗಾರಕೊಪ್ಪಲು, ಡಿ.ಕೆ.ಕೊಪ್ಪಲು, ಸಿದ್ದಾಪುರ, ಗೌಡೇನಹಳ್ಳಿ, ಮಾದಹಳ್ಳಿ, ಸಿದ್ದನಕೊಪ್ಪಲು ಸೇರಿದಂತೆ ಇತರ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು ಈ ಯೋಜನೆಯಿಂದ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಬಜೆಟ್‌ಗೆ ಅನುಮೋದನೆ ದೊರೆತ ಕೂಡಲೇ ತ್ವರಿತವಾಗಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿರುವ ಅವರು ಈ ಸಂಬoದ ನಾನು ಇನ್ನೊಂದು ವಾರದಲ್ಲಿ ಏತ ನೀರಾವರಿಯಿಂದ ಅನುಕೂಲವಾಗಲಿರುವ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಕಾಮಗಾರಿ ರೂಪುರೇಷೆ ತಯಾರಿಸಿ ಅನುಷ್ಠಾನಗೊಳಿಸಲು ಗಮನಹರಿಸುತ್ತೇನೆ ಎಂದರು.
ಕೆಸ್ತೂರುಕೊಪ್ಪಲು ಏತನೀರಾವರಿ ಯೋಜನೆಯ ಕಾಮಗಾರಿಗೆ ಹಣ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಶಾಸಕ ಡಿ.ರವಿಶಂಕರ್ ತಿಳಿಸಿದರು.