ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಜೆರೊಸಾ ಶಾಲೆಯಲ್ಲಿ ಶಿಕ್ಷಕಿಯೋರ್ವೆ ಹಿಂದೂ ಧರ್ಮದ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ನಡೆದ ಪ್ರತಿಭಟನೆ ವೇಳೆ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿರುವುದು ಕಂಡು ಬಂದಿದೆ. ಈ ಬಗ್ಗೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ಆಯೋಗದ ಮಾಜಿ ಅಧ್ಯಕ್ಷೆ ಡಾ.ಕೃಪಾ ಅಮರ್ ಆಳ್ವ ತಿಳಿಸಿದ್ದಾರೆ.
ಅವರು ಇಂದು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಲೆಯಲ್ಲಿ ಶಿಕ್ಷಕಿ ಹಿಂದೂ ಧರ್ಮದ ನಿಂದನೆ ಮಾಡಿದ್ದಾರೆ ಎಂದು ದೂರಲಾಗಿದೆ. ಈ ವಿಚಾರದಲ್ಲಿ ರಾಜಕೀಯವಾಗಿ ಮಾತನಾಡುತ್ತಿಲ್ಲ. ಆದರೆ ಪುಟ್ಟ ಮಕ್ಕಳನ್ನು ಶಾಲೆಯ ಗೇಟಿನ ಬಳಿ ನಿಲ್ಲಿಸಿ ರಾಜಕೀಯ ಪಕ್ಷದ ನಾಯಕರು ಬಳಸಿಕೊಂಡಿರುವುದು ಖಂಡನೀಯ ಎಂದರು.
ಇದು ಮಕ್ಕಳ ಸ್ವಾತಂತ್ರ್ಯ ಮತ್ತು ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ನಾನು ಆಯೋಗದ ಅಧ್ಯಕ್ಷತೆಯಾಗಿದ್ದ ವೇಳೆ ಚುನಾವಣೆಗೆ ಮಕ್ಕಳನ್ನು ಬಳಸುವ ಮತ್ತು ಇಂತಹ ಪ್ರತಿಭಟನೆಗೆ ಬಳಸುವ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಿದ್ದೆ. ಅದೇ ರೀತಿ ಶಾಲಾ ನಿಯಮಗಳ ಪ್ರಕಾರ ಮಕ್ಕಳನ್ನು ಮುಂದಿಟ್ಟು ಶಾಲೆಯ ಆವರಣದೊಳಗೆ ಅಥವಾ ಗೇಟ್ ಬಂದ್ ಮಾಡಿ ಅವರನ್ನು ತಡೆದು ಪ್ರತಿಭಟಿಸಲು ಬಳಸುವುದು ಅಪರಾಧವಾಗಿದೆ. ಆ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಆಯೋಗವು ಡಿಡಿಪಿಐಯಿಂದ ವರದಿ ಪಡೆದುಕೊಂಡು ಕ್ರಮ ವಹಿಸುವ ನಿರೀಕ್ಷೆ ಇದೆ ಎಂದರು.