ಅಮೀರ್ ಖಾನ್ ಅವರ ದಂಗಲ್ ಚಿತ್ರದಲ್ಲಿ ಯುವ ಬಬಿತಾ ಫೋಗಟ್ ಪಾತ್ರವನ್ನು ನಿರ್ವಹಿಸಿದ್ದ ಸುಹಾನಿ ಭಟ್ನಾಗರ್ ೧೯ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಯುವ ನಟಿ ಅಕಾಲಿಕ ಸಾವಿನ ಸುದ್ದಿ ಅಭಿಮಾನಿಗಳಿಗೆ ಆಘಾತ ಉಂಟು ಮಾಡಿದ್ದು, ಇವರ ಸಾವಿಗೆ ಬಳಸುತ್ತಿದ್ದ ಔಷಧಿಯ ಅಡ್ಡ ಪರಿಣಾಮ ಕಾರಣ ಎನ್ನಲಾಗಿದೆ. ದಂಗಲ್ ಚಿತ್ರದಲ್ಲಿ ಅಮೀರ್ ಕಿರಿ ಮಗಳು ಬಬಿತಾ ಪಾತ್ರದಲ್ಲಿ ನಟಿಸಿದ್ದರು.
ಜೂನಿಯರ್ ಬಬಿತಾ ಫೋಗಟ್ ಪಾತ್ರದಲ್ಲಿ ನಟಿಸಿದ್ದ ಸುಹಾನಿ ಭಟ್ನಾಗರ್ ಇತ್ತೀಚೆಗಷ್ಟೇ ಅಪಘಾತವಾಗಿತ್ತು. ಆ ಅಪಘಾತದಿಂದ ಅವರ ಕಾಲಿನ ಮೂಳೆ ಮುರಿದಿತ್ತು. ಜತೆಗೆ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು. ಸಾವಿಗೆ ನಿಖರ ವಿಚಾರ ಏನು ಎಂಬ ಬಗ್ಗೆ ಅಧಿಕೃತವಾಗಿ ಹೊರಬಿದ್ದಿಲ್ಲವಾದರೂ, ಔಷಧಿ ಮಾತ್ರೆಗಳ ಸೈಡ್ ಎಫೆಕ್ಟ್‌ನಿಂದ ಸುಹಾನಿ ನಿಧನರಾಗಿದ್ದಾರೆ ಎನ್ನಲಾಗುತ್ತಿದೆ. ಆಕೆಗೆ ಸೂಚಿಸಿದ ಔಷಧಿಗಳು ಆಕೆಯ ಮೇಲೆ ಅಡ್ಡ ಪರಿಣಾಮಗಳನ್ನು ಬೀರಿದ್ದು, ಆಕೆಯ ದೇಹದಲ್ಲಿ ನಿಧಾನವಾಗಿ ನೀರಿನಾಂಶ ಶೇಖರಣೆ ಪ್ರಾರಂಭವಾಗಿತ್ತು ಎಂದು ವರದಿಗಳು ತಿಳಿಸಿವೆ.
ಕಳೆದ ಕೆಲ ತಿಂಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸುಹಾನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಫೆ.೧೭ ರಂದು ಸುಹಾನಿ ನಿಧನರಾಗಿರುವುದಾಗಿ ವರದಿಯಾಗಿದೆ. ಅಂತ್ಯಕ್ರಿಯೆಯನ್ನು ದೆಹಲಿಯ ಫರಿದಾಬಾದ್‌ನ ಸೆಕ್ಟರ್ -೧೫ರಲ್ಲಿನ ಅಜ್ರೌಂಡಾ ಸ್ಮಶಾನದಲ್ಲಿ ನೆರವೇರಿಸಲು ಕುಟುಂಬದವರು ನಿರ್ಧರಿಸಿರುವುದಾಗಿವರದಿಗಳು ತಿಳಿಸಿದೆ. ೨೦೧೬ರಲ್ಲಿ ಬಿಡುಗಡೆಗೊಂಡಿದ್ದ ದಂಗಲ್‌ನಲ್ಲಿ ಬಬಿತಾ ಫೋಗಟ್ ಪಾತ್ರದಲ್ಲಿ ಸುಹಾನಿ ನಟನೆಗೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ನಟನೆ ಮಾತ್ರವಲ್ಲದೆ, ಅನೇಕ ಟಿವಿ ಜಾಹೀರಾತುಗಳಲ್ಲಿಯೂ ಸುಹಾನಿ ಅವಕಾಶ ಗಳಿಸಿದ್ದರು.