ಕಲಾದಗಿ: ಗ್ರಾಮದ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಮಠದ ಪೀಠಾಧಿಪತಿ ಆಯ್ಕೆ ವಿಚಾರಕ್ಕೆ ಸಂಬಂಧಿಸಿದ ವಿವಾದ ತಾರಕಕ್ಕೇರಿದ್ದು, ಬಾಳೆಹೊನ್ನುರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಮಠದ ಭಕ್ತರು ಪ್ರತಿಭಟನೆ ನಡೆಸಿದರು.
ಉದಗಟ್ಟಿ ಗ್ರಾಮಕ್ಕೆ ಅಡ್ಡ ಪಲ್ಲಕ್ಕಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಶ್ರೀಗಳ ಕಾರನ್ನು ನಿಲ್ಲಿಸುವಂತೆ ಭಕ್ತರು ಮುತ್ತಿಗೆ ಹಾಕಿದ ವೇಳೆ ತಳ್ಳಾಟ, ನೂಕಾಟ ಉಂಟಾಗಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ರಂಭಾಪುರಿ ಶ್ರೀಗಳ ವಿರುದ್ಧ ಧಿಕ್ಕಾರ ಕೂಗಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಆಗ ಮಧ್ಯೆ ಪ್ರವೇಶಿಸಿದ ಪೊಲೀಸರು ಶ್ರೀಗಳಿದ್ದ ವಾಹನ ಹೋಗಲು ಅನುವು ಮಾಡಿಕೊಟ್ಟರು. ಆಗ ಮಹಿಳೆಯೊಬ್ಬರು ಕಾರಿನತ್ತ ಚಪ್ಪಲಿ ಎಸೆದ ಘಟನೆಯೂ ನಡೆಯಿತು.
ಗುರುಲಿಂಗೇಶ್ವರ ಮಠದ ವಿವಾದ ನ್ಯಾಯಾಲಯದಲ್ಲಿರುವಾಗಲೇ ಗಂಗಾಧರ ಸ್ವಾಮಿ ಮಠದ ದುರಸ್ತಿ ಕಾರ್ಯ ಮಾಡುವುದಕ್ಕೆ, ಮಠದ ಹೊಲ ಉಳುಮೆ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ರಂಭಾಪುರಿ ಶ್ರೀಗಳ ವಿರುದ್ಧ ಕಲಾದಗಿಯಲ್ಲಿ ಮಠದ ಭಕ್ತರು ಪ್ರತಿಭಟನೆ ನಡೆಸಿದರು.