ಓರ್ವ ಸರ್ಕಾರದ ನಾಮ ನಿರ್ದೇಶನ ಸ್ಥಾನ ರದ್ದು
ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ತಾಲೂಕಿನ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಆರು ಮಂದಿ ರಾಜೀನಾಮೆ ನೀಡಿದ್ದು, ಇದರ ಜತೆಗೆ ಓರ್ವ ಸರ್ಕಾರದ ನಾಮ ನಿರ್ದೇಶನ ಸ್ಥಾನವನ್ನು ರದ್ದು ಪಡಿಸಲಾಗಿದೆ.
ಈ ಬೆಳವಣಿಗೆಯಿಂದ ಅಧಿಕಾರದಲ್ಲಿರುವ ಜೆಡಿಎಸ್ ನೇತೃತ್ವದ ಆಡಳಿತ ಮಂಡಳಿ ಪತನದ ಭೀತಿ ಎದುರಿಸುತ್ತಿದ್ದು, ಈ ಬೆಳವಣಿಗೆ ಕ್ಷೇತ್ರಧಾದ್ಯಂತ ತೀವ್ರ ರಾಜಕೀಯ ಚರ್ಚೆಗೆ ಗುರಿಯಾಗಿದೆ.
ಟಿಎಪಿಸಿಎಂಎಸ್ ಆಡಳಿತ ಮಂಡಳಿಯಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್.ವಿ.ದೇವರಹಟ್ಟಿ, ಸರ್ಕಾರದ ನಾಮ ನಿರ್ದೇಶಿತ ಸದಸ್ಯ ದೊಡ್ಡಕೊಪ್ಪಲು ರವಿ ಸಹಕಾರ ಸಂಘದ ಸಹಾಯಕ ನಿಬಂಧಕ ಸೇರಿ ಒಟ್ಟು ೧೫ ಮಂದಿ ನಿರ್ದೇಶಕರು ಇದ್ದು ಸಭೆ ನಡೆಸಲು ೮ ಮಂದಿ ಹಾಜರಿ ಕಡ್ಡಾಯವಾಗಿದ್ದು ಈ ಬೆಳವಣಿಗೆಯಿಂದ ಸಂಘದ ಉಳಿವು ಡೋಲಾಯಮನವಾಗಿದೆ.
ಪ್ರಸ್ತುತ ಟಿಎಪಿಸಿಎಂಎಸ್ ಆಡಳಿತ ಮಂಡಳಿಯಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಕಳೆದ ೮ ತಿಂಗಳ ಹಿಂದೆ ಡಿ.ರವಿಶಂಕರ್ ಶಾಸಕರಾಗಿ ಆಯ್ಕೆಯಾದ ನಂತರ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ನಿತ್ಯ ಹಗ್ಗ- ಜಗ್ಗಾಟ ನಡೆಯುತ್ತಿದ್ದು, ಅಂತಿಮವಾಗಿ ರಾಜೀನಾಮೆ ಪರ್ವಕ್ಕೆ ನಾಂದಿಯಾಡಿದ್ದು ಇದು ರಾಜಕೀಯ ಕೋಲಾಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ೬ ಸದಸ್ಯರ ರಾಜೀನಾಮೆ ಮತ್ತು ನಾಮನಿರ್ದೇಶಿತ ನಿರ್ದೇಶಕ ನೇಮಕ ರದ್ದತಿಯಿಂದ ಮುಂದೆ ನಡೆಯುವ ಎಲ್ಲಾ ಸಭೆಗಳಿಗೂ ಕೋರಂ ಅಭಾವ ಎದುರಾಗಲಿದ್ದು ೩ ಸಭೆಗಳ ನಂತರ ಆಡಳಿತ ಮಂಡಳಿಯೇ ವಿಸರ್ಜನೆಯಾಗುವುದು ಖಚಿತವಾಗಿದೆ.
ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಟಿ.ಎಲ್.ಪರಶಿವಮೂರ್ತಿರವರ ದುರಾಡಳಿತ ಮತ್ತು ಪಕ್ಷಪಾತ ಧೋರಣೆಯಿಂದ ಬೇಸತ್ತು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ರಾಜೀನಾಮೆ ನೀಡಿದ್ದು ಇದರ ಜತೆಗೆ ಸರ್ಕಾರದ ನಾಮ ನಿರ್ದೇಶನವನ್ನು ವಾಪಸ್ ಪಡೆಯಲಾಗಿದೆ ಎಂದು ರಾಜೀನಾಮೆ ನೀಡಿರುವ ನಿರ್ದೇಶಕರುಗಳ ತಂಡ ಮುಖ್ಯಸ್ಥ ಎಸ್.ಸಿದ್ದೇಗೌಡ ತಿಳಿಸಿದ್ದಾರೆ.
ಸಹಕಾರ ಸಂಘದ ನಿಯಮಾನುಸಾರ ನಿಯಮಿತವಾಗಿ ಸಭೆ ಕರೆಯದೆ ನಿಯಮ ಉಲ್ಲಂಘಿಸುವುದರೊoದಿಗೆ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಸ್ವಜನ ಪಕ್ಷ ಪಾತ ಮಾಡುತ್ತಿದ್ದ ಅಧ್ಯಕ್ಷರ ಧೋರಣೆಯನ್ನು ಖಂಡಿಸಿ ನಾವು ರಾಜೀನಾಮೆ ನೀಡಿದ್ದು ಮುಂದೆ ಹೊಸದಾಗಿ ಚುನಾವಣೆ ನಡೆದು ಹೊಸ ಆಡಳಿತ ಮಂಡಳಿ ಆಯ್ಕೆಯಾಗಬೇಕೆಂಬುದು ನಮ್ಮ ಉದ್ದೇಶ ಎಂದು ತಿಳಿಸಿದ್ದಾರೆ.
ಅಧ್ಯಕ್ಷರು ತಮ್ಮಗಿಷ್ಟ ಬಂದoತೆ ಅಧಿಕಾರ ನಡೆಸುತ್ತಿದ್ದು ನಮ್ಮನ್ನು ಯಾವಾಗಲು ನಿರ್ಲಕ್ಷö್ಯ ಮಾಡುತ್ತಿದ್ದರಿಂದ ನಾವು ರಾಜೀನಾಮೆ ನೀಡಿದ್ದು ಮುಂದೆ ಎದುರಾಗುವ ಚುನಾವಣೆ ಎದುರಿಸಲು ಸಿದ್ದರಿದ್ದೇವೆ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.