ಬೆಂಗಳೂರು: ಇಂದಿನಿಂದ ಫೆ.೨೧ರಿಂದ ಬೆಂಬಲ ಬೆಲೆಯಡಿ ಉಂಡೆ ಕೊಬ್ಬರಿ ಖರೀದಿಸಲಾಗುತ್ತಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಜೆಡಿಎಸ್‌ನ ಬಿ.ಎಂ.ಫಾರೂಕ್, ಕೆ.ಎ.ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಜಿಲ್ಲೆಗಳಲ್ಲಿ ವರ್ತಕರು ರೈತರ ಪಹಣಿ ಬಳಸಿಕೊಂಡು ನೋಂದಣಿ ಮಾಡಿಸಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇದುವರೆಗೆ ಆಗಿದ್ದ ನೋಂದಣಿಯನ್ನು ರದ್ದುಪಡಿಸಲಾಗಿದೆ. ಹೊಸದಾಗಿ ನೋಂದಣಿ ಮಾಡಲು ೪೫ ದಿನಗಳ ಅವಕಾಶ ನೀಡಲಾಗಿದೆ. ನಿಗದಿತ ಎಲ್ಲ ಖರೀದಿ ಕೇಂದ್ರಗಳಲ್ಲೂ ಮೂರು ತಿಂಗಳವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ ಎಂದರು.
ತುಮಕೂರು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಹಾ ಮಂಡಳ ಹಾಗೂ ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ದಕ್ಷಿಣ ಕನ್ನಡ, ರಾಮನಗರ ಜಿಲ್ಲೆಗಳಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಕ ಮಾಡಲಾಗಿದೆ. ಆಧಾರ್ ಆಧಾರಿತ ಬಯೋಮೆಟ್ರಿಕ್ ಮೂಲಕ ನೋಂದಣಿ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು. ರೈತರ ಹೆಸರಲ್ಲಿ ನೋಂದಣಿ ಮಾಡಿಸಲು ವರ್ತಕರಿಗೆ ಅವಕಾಶ ನೀಡಿದ್ದ ಆರೋಪದ ಮೇಲೆ ಒಂಬತ್ತು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದರು.
ಕೇಂದ್ರ ಸರ್ಕಾರ ೬೫ ಸಾವಿರ ಟನ್ ಖರೀದಿಗೆ ಅನುಮತಿ ನೀಡಿದೆ. ಮಿಲ್ಲಿಂಗ್ ಕೊಬ್ಬರಿ ಖರೀದಿಗೆ ಕೇಂದ್ರದ ಅನುಮತಿ ದೊರೆತರೆ ರಾಜ್ಯ ಸರ್ಕಾರವೂ ಬೆಂಬಲ ಬೆಲೆ ನೀಡಲಿದೆ. ಉಂಡೆ ಕೊಬ್ಬರಿ ಮತ್ತು ಮಿಲ್ಲಿಂಗ್ ಕೊಬ್ಬರಿ ಧಾರಣೆಯಲ್ಲಿ ೧ ಸಾವಿರ ವ್ಯತ್ಯಾಸವಾಗಬಹುದು ಎಂದು ವಿವರಿಸಿದರು.