ನವದೆಹಲಿ: ಪ್ರತಿಭಟನಾ ನಿರತ ರೈತರ ದೆಹಲಿ ಚಲೋ ಮೆರವಣಿಗೆ ಮಂಗಳವಾರ ನಡೆಯಲಿದ್ದು, ಅಂತಾರಾಜ್ಯ ಗಡಿ ಪ್ರದೇಶಗಳಿಂದ ಬುಲ್ಡೋಜರ್ ಗಳು ಹಾಗೂ ಇನ್ನಿತರ ಬೃಹತ್ ಯಂತ್ರೋಪಕರಣಗಳನ್ನು ವಶಕ್ಕೆ ಪಡೆಯುವಂತೆ ಹರ್ಯಾಣ ಪೊಲೀಸರು ಪಂಜಾಬ್ ಪೊಲೀಸರಿಗೆ ತಿಳಿಸಿದ್ದಾರೆ.
ಬ್ಯಾರಿಕೇಡ್ ಗಳನ್ನು ಈ ಬೃಹತ್ ಯಂತ್ರೋಪಕರಣಗಳನ್ನು ಬಳಕೆ ಮಾಡುವುದರ ಮೂಲಕ ಪ್ರತಿಭಟನಾ ನಿರತರು ಮುರಿದುಹಾಕುವ ಸಾಧ್ಯತೆ ಇರುವುದರಿಂದ ಇವುಗಳನ್ನು ವಶಕ್ಕೆ ಪಡೆಯುವಂತೆಪೊಲೀಸರು ಸೂಚನೆ ನೀಡಿದ್ದಾರೆ. ಈ ರೀತಿಯ ಬೃಹತ್ ಯಂತ್ರೋಪಕರಣಗಳನ್ನು ರೈತರು ದೆಹಲಿ ಚಲೋ ವೇಳೆ ಬಳಕೆ ಮಾಡುವುದರಿಂದ, ಗಡಿ ಭಾಗದಲ್ಲಿ ನಿಯೋಜಿಸಲ್ಪಟ್ಟಿರುವ ಆಂತರಿಕ ಭದ್ರತಾ ಸಿಬ್ಬಂದಿಗಳಿಗೆ ಅಪಾಯವಾಗುವ ಸಾಧ್ಯತೆ ಇದೆ ಎಂದು ಹರ್ಯಾಣ ಡಿಜಿಪಿ ಶತ್ರುಜೀತ್ ಕಪೂರ್ ಪಂಜಾಬ್ ಡಿಜಿಪಿಗೆ ಕಳಿಸಿರುವ ತುರ್ತು ಸಂದೇಶದಲ್ಲಿ ತಿಳಿಸಿದ್ದಾರೆ.
ಪಂಜಾಬ್ ಡಿಜಿಪಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಳಿಸಲಾದ ಸಂವಹನದಲ್ಲಿ, ಯಾವುದೇ ಜೆಸಿಬಿಗಳು ಮತ್ತು ಇತರ ಭಾರೀ ಉಪಕರಣಗಳನ್ನು ಖಾನೌರಿ ಮತ್ತು ಶಂಬು ಗಡಿ ಪಾಯಿಂಟ್ ಗಳಿಗೆ ತಲುಪಲು ಅನುಮತಿಸಬಾರದು ಎಂದು ಹೇಳಿದ್ದು, ಪ್ರತಿಭಟನಾಕಾರರು ಬ್ಯಾರಿಕೇಡ್‌ಗಳನ್ನು ಮುರಿದು ಹರಿಯಾಣಕ್ಕೆ ಪ್ರವೇಶಿಸಲು ಯೋಜಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ಹೇಳಿದ್ದಾರೆ.