ಬೆಂಗಳೂರು: ೫೪೫ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಯಲ್ಲಿ ಒಎಂಆರ್ ಉತ್ತರ ಪತ್ರಿಕೆಗಳನ್ನು ಸಿಐಡಿ ಕಚೇರಿಯ ಭದ್ರತಾ ಕೊಠಡಿಯಲ್ಲಿಯೇ (ಸ್ಟ್ರಾಂಗ್ ರೂಮ್) ತಿದ್ದಿರುವುದು ಸಾಕ್ಷಿಗಳಿಂದ ದೃಢಪಟ್ಟಿದೆ ಎಂದು ನಿವೃತ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ಏಕ ಸದಸ್ಯ ತನಿಖಾ ಆಯೋಗ ಹೇಳಿದೆ.
ಸಿಐಡಿ ಕಚೇರಿಯ ಅಧಿಕಾರಿ, ಸಿಬ್ಬಂದಿ ಕೆಲವು ಅಭ್ಯರ್ಥಿಗಳಿಂದ ೩೦ ಲಕ್ಷದಿಂದ ೮೦ ಲಕ್ಷದವರೆಗೆ ಹಣ ಪಡೆದು, ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಬಳಸಿದ ಪೆನ್ನು ಮತ್ತು ಒಎಂಆರ್ ಪ್ರತಿ ಪಡೆದುಕೊಂಡು, ಭದ್ರತಾ ಕೊಠಡಿಯಲ್ಲಿ ಇರಿಸಿದ್ದ ಮೂಲ ಒಎಂಆರ್ ಶೀಟ್‌ಗಳನ್ನು ತಿದ್ದಿದ್ದಾರೆ’ ಎಂದೂ ಆಯೋಗದ ವರದಿ ಉಲ್ಲೇಖಿಸಿದೆ.
ಆಯೋಗದ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸರ್ಕಾರ ತಯಾರಿ ನಡೆಸಿದೆ. ಅದಕ್ಕೆ ಮೊದಲು ಸಚಿವ ಸಂಪುಟ ಸಭೆಯ ಅನುಮೋದನೆಗಾಗಿ ವರದಿಯ ಮುಖ್ಯಾಂಶಗಳ ಟಿಪ್ಪಣಿಯನ್ನು ಗೃಹ ಇಲಾಖೆ ಸಿದ್ಧಪಡಿಸಿದೆ.
ಕೆಲವು ಅಭ್ಯರ್ಥಿಗಳು ಮತ್ತು ಅವರ ಸ್ನೇಹಿತರು ಹಣ ನೀಡಿ ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಬ್ಲೂಟೂತ್ ಉಪಕರಣಗಳ ಮೂಲಕ ಆರ್.ಡಿ. ಪಾಟೀಲರ ತಂಡ ನೀಡಿದ ಉತ್ತರಗಳನ್ನು ಭರ್ತಿ ಮಾಡಿ ಆಯ್ಕೆಯಾಗಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ದಿವ್ಯಾ ಹಾಗರಗಿ, ರಾಜೇಶ್ ಹಾಗರಗಿ, ಪ್ರಾಂಶುಪಾಲರಾದ ಕಾಶಿನಾಥ ಚಿಲ್ಲಾ, ಸಂವೀಕ್ಷಕರಾದ ಸಾವಿತ್ರಿ ಕಾಬಾ, ಸುಮಾ ಕಂಬಳಿಮಠ, ಸಿದ್ದಮ್ಮ ಬಿರಾದಾರ, ಅರ್ಚನಾ ಹೊನಗೇರಿ ಮತ್ತು ಸುನಂದಾ ಅಲಿಯಸ್ ಸುನೀತಾ ಮುಳಗೆ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ.
ಇವರ ವಿರುದ್ಧ ಸಿಐಡಿ ದಾಖಲಿಸಿರುವ ೧೭ ಕ್ರಿಮಿನಲ್ ಪ್ರಕರಣಗಳ ಸಂಪೂರ್ಣ ತನಿಖೆ ಕೈಗೊಂಡು ಮುಂದಿನ ಕ್ರಮ ವಹಿಸಬೇಕು ಎಂದು ಆಯೋಗ ಅಭಿಪ್ರಾಯಪಟ್ಟಿದೆ. ಅಲ್ಲದೆ, ನಾಗರಿಕ ಸಮಾಜದ ಕಡೆಗೆ ಪೊಲೀಸ್ ಅಧಿಕಾರಿಗಳ ಕರ್ತವ್ಯ ಮತ್ತು ಕಾರ್ಯವೈಖರಿಯ ಬಗ್ಗೆಯೂ ಆಯೋಗವು ತನ್ನ ವರದಿಯಲ್ಲಿ ವಿವರಣೆ ನೀಡಿದೆ.