ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸವಿತಾ ಸಮಾಜದ ಕುಲ ಕಸಬನ್ನು ಉಳಿಸುವ ಮತ್ತು ಯುವಕರನ್ನು ಉತ್ತೇಜಿಸುವ ಸಲುವಾಗಿ ಸಮಾಜದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಕಲಾವಿದರು ಸೇರಿದಂತೆ ಇತರರನ್ನು ಗೌರವಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕುಲ ಬಾಂಧವರ ವೇದಿಕೆ ರಾಜ್ಯಾಧ್ಯಕ್ಷ ಲೋಕೇಶ್‌ಹಲಗೆರೆ ಹೇಳಿದರು.
ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಸವಿತಾ ಸಮಾಜದ ಮಂಗಳವಾದ್ಯ ಕಲಾವಿದರಾದ ಲಕ್ಷ್ಮಯ್ಯ ಮತ್ತು ಸ್ವಾಮಣ್ಣ ಅವರುಗಳಿಗೆ ಕುಲ ಬಾಂಧವರ ವೇದಿಕೆ ವತಿಯಿಂದ ಸನ್ಮಾನಿಸಿ ನಂತರ ಮಾತನಾಡಿದ ಅವರು ನಮ್ಮ ಸಮಾಜ ಸೂಕ್ಷ್ಮಾತಿ ಸೂಕ್ಷ್ಮ ಸಮಾಜದವಾಗಿದ್ದು ನಮ್ಮಲ್ಲಿರುವ ಕಲಾವಿದರನ್ನು ಯಾವುದೇ ಸರ್ಕಾರಗಳಾಗಲಿ ಅಥವಾ ಸಂಸ್ಥೆಗಳು ಗುರುತಿಸುವ ಕೆಲಸ ಮಾಡುತ್ತಿಲ್ಲ ಆದ್ದರಿಂದ ನಮ್ಮ ವೇದಿಕೆ ವತಿಯಿಂದ ಈ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸವಿತಾ ಸಮಾಜದವರು ಶತಕಗಳ ಹಿಂದಿನಿಂದಲೂ ಕ್ಷೌರಿಕ ವೃತ್ತಿ ಮತ್ತು ಮಂಗಳ ವಾದ್ಯಗಳನ್ನು ನುಡಿಸಿಕೊಂಡು ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ನಮ್ಮ ವೃತ್ತಿಗಳನ್ನು ಮಾಡುವವರ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ ಎಂದು ವಿಷಾಧ ವ್ಯಕ್ತಪಡಿಸಿದ ರಾಜ್ಯಾಧ್ಯಕ್ಷರು ಸಮಾಜದ ಯುವಕರು ತಮ್ಮ ವೃತ್ತಿಯಲ್ಲಿಯೇ ಹೆಚ್ಚು ಸಂಪಾದನೆ ಮಾಡುವುದರ ಜತೆಗೆ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಬಹುದಾಗಿದೆ ಆದ್ದರಿಂದ ಯುವಕರು ನಮ್ಮ ವೃತ್ತಿಯನ್ನು ಗೌರವದಿಂದ ಕಾಣುವುದರ ಜತೆಗೆ ಸಾಂಪ್ರಾದಾಯಿಕ ವೃತ್ತಿಯನ್ನು ಉಳಿಸುವಂತೆ ಮನವಿ ಮಾಡಿದರು.
ವೇದಿಕೆ ವತಿಯಿಂದ ಈಗಾಗಲೇ ಸಾವಿರಕ್ಕೂ ಹೆಚ್ಚು ಹಿರಿಯ ಕಲಾವಿದರು ಸೇರಿದಂತೆ ಸವಿತಾ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅವರುಗಳು ಇರುವ ಬಳಿಗೆ ಹೋಗಿ ವೇದಿಕೆ ವತಿಯಿಂದ ಸನ್ಮಾನಿಸುವ ಕೆಲಸ ಮಾಡುತ್ತಿದ್ದು ಮುಂದಿನಗಳಲ್ಲಿ ರಾಜ್ಯದ ಮೂಲೆ ಮೂಲೆಗಳಿಗೂ ತೆರಳಿ ಕ್ಷೌರಿಕ ವೃತ್ತಿ ಮತ್ತು ಮಂಗಳ ವಾದ್ಯ ನುಡಿಸುವವರಿಗೆ ಸನ್ಮಾನಿಸುವುದರ ಜತೆಗೆ ಸಮಾಜದ ವೃತ್ತಿಯನ್ನು ಉಳಿಸುವ ನಿಟ್ಟಿನಲ್ಲಿ ಮನವಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕುಲ ಭಾಂದವರ ವೇದಿಕೆ ರಾಜ್ಯ ಗೌರವಾಧ್ಯಕ್ಷ ಎಂ.ಎಸ್.ರಾಜಣ್ಣ, ಮಂಡ್ಯತೇಜಸ್, ಕೆ.ಆರ್.ನಗರ ತಾಲೂಕು ಕೇಶಾಲಾಂಕಾರಿಗಳ ಸಂಘದ ಅಧ್ಯಕ್ಷ ಎಂ.ಎಸ್.ರಾಜೇಶ್, ಪದಾಧಿಕಾರಿಗಳಾದ ಕುಮಾರ್, ಮಂಜುನಾಥ್, ಭಾಸ್ಕರ್, ಗಣೇಶ್, ಸೇರಿದಂತೆ ಇನ್ನಿತರರು ಹಾಜರಿದ್ದರು.