Wednesday, April 16, 2025
Google search engine

Homeರಾಜ್ಯಜನ-ಜಾನುವಾರುಗಳಿಗೆ ಕುಡಿವ ನೀರು: ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ

ಜನ-ಜಾನುವಾರುಗಳಿಗೆ ಕುಡಿವ ನೀರು: ತುರ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ: ಜಿಲ್ಲೆಯ ಕೆಲವೆಡೆ ಮುಂಗಾರು ವಿಳಂಬವಾಗುತ್ತಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದ್ದರಿಂದ ಎಲ್ಲ ತಹಶೀಲ್ದಾರರು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಟಾಸ್ಕ್ ಫೋರ್ಸ್ ಸಭೆ ನಡೆಸಿ ಅಗತ್ಯ ಕ್ರಮಗಳು ಹಾಗೂ ಅಗತ್ಯ ಅನುದಾನದ ಬಗ್ಗೆ ಪ್ರಸ್ತಾವನೆ ಸಲ್ಲಿಸಬೇಕು.

ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆ ಕುರಿತು ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳ ವಿಡಿಯೊ ಸಂವಾದ ಸಭೆಯಲ್ಲಿ ಮಾತನಾಡಿದರು. ಆಯಾ ತಾಲೂಕು ಅಥವಾ ಕ್ಷೇತ್ರದಲ್ಲಿ ತುರ್ತು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಕಾರ್ಯಪಡೆ ಸಭೆ ನಡೆಸಿ ಅಗತ್ಯ ಅನುದಾನದ ಪ್ರಸ್ತಾವನೆ ಸಿದ್ಧಪಡಿಸಬೇಕು. ಇದನ್ನು ಆಧರಿಸಿ ಹೆಚ್ಚುವರಿ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಲಭ್ಯವಿರುವ ಅನುದಾನದಲ್ಲಿ ಶಾಸಕರ ಸಲಹೆಯಂತೆ ಕಾಮಗಾರಿ ಆರಂಭಿಸಬೇಕು. ಜನರಿಗೆ ಕುಡಿಯುವ ನೀರು ಪೂರೈಸಲು ತುರ್ತು ಕಾಮಗಾರಿ ಕೈಗೊಳ್ಳಲು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಗೆ ಸಾಕಷ್ಟು ಅನುದಾನ ಲಭ್ಯವಾಗಲಿದೆ. ಪ್ರತಿ ತಾಲೂಕಿಗೆ ಹೊಂದಾಣಿಕೆ ಮೂಲಕ ಇನ್ನೂ ಹೆಚ್ಚಿನ ಅನುದಾನ ದೊರೆಯಲಿದೆ. ಹಾಗಾಗಿ ಕುಡಿಯುವ ನೀರು ಪೂರೈಕೆಗೆ ತುರ್ತು ಕ್ರಮ ಕೈಗೊಳ್ಳಬಹುದು. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆಗಳು: ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದರೆ ಕೂಡಲೇ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಎಲ್ಲ ತಹಶೀಲ್ದಾರರು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು. ಟ್ಯಾಂಕರ್ ಮೂಲಕ ನೀರು ಪೂರೈಸಲು ಮತ್ತು ತುರ್ತು ಕಾರ್ಯಾಚರಣೆ ಆರಂಭಿಸಲು ಅನುದಾನ ಲಭ್ಯವಿದ್ದು, ಅನುದಾನವನ್ನು ಅಗತ್ಯಕ್ಕೆ ತಕ್ಕಂತೆ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು. ಎಲ್ಲ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾ.ಪಂ.ಗಳಲ್ಲಿ ಅನುದಾನ ಲಭ್ಯವಿದ್ದು, ಖಾಸಗಿ ಕೊಳವೆಬಾವಿಗಳಿದ್ದರೆ ಕೂಡಲೇ ಬಾಡಿಗೆ ನೀಡಬೇಕು ಎಂದರು. ತಹಶೀಲ್ದಾರರು ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಅರಿತು ಕೂಡಲೇ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಲ್ ಭೋರ್ ಮಾತನಾಡಿ, ಅಥಣಿ ತಾಲೂಕಿನ ಏಳು ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. 40 ಕಡೆಗಳಲ್ಲಿ ಕೊಳವೆಬಾವಿಗಳ ಮೂಲಕ ನೀರು ಒದಗಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು. ಅದೇ ರೀತಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಟ್ಯಾಂಕರ್ ಮೂಲಕ ನೀರು ನೀಡಲಾಗುತ್ತಿದೆ. ತುದಿ ಬಾವಿ ತೋಡಲು ಹಣದ ಕೊರತೆ ಇರುವುದಿಲ್ಲ. ಸಾಧ್ಯವಿರುವಲ್ಲೆಲ್ಲಾ ತೆರೆದ ಬಾವಿ, ಕೊಳವೆಬಾವಿ ನಿರ್ಮಿಸಲು ಪ್ರಸ್ತಾವನೆಗಳು ಬರುತ್ತಿವೆ ಎಂದು ಹರ್ಷಲ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲೆಯ ಎಲ್ಲ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖಂಡರು, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular