ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸೇಂಟ್ ಫಿಲೊಮಿನಾ ಮತ್ತು ಎಸ್‌ಡಿಎಂ ಕಾಲೇಜಿನ ಮಾಜಿ ವಿದ್ಯಾರ್ಥಿ, ೨೫ ವರ್ಷದ ಅನಿಲ್ ಜಾನ್ ಸೀಕ್ವೈರಾ ಸೇರಿದಂತೆ ೩೩ ಅಭ್ಯರ್ಥಿಗಳು ಸಿವಿಲ್ ನ್ಯಾಯಮೂರ್ತಿಗಳಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದೆ.
೨೫ನೇ ವರ್ಷಕ್ಕೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಅನಿಲ್ ಅವರು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರು ಎನ್ನಲಾಗಿದೆ.
ಕರ್ನಾಟಕ ನ್ಯಾಯಾಂಗ ಸೇವೆಗಳ (ನೇಮಕಾತಿ) ನಿಯಮಗಳು ೨೦೦೪ ಮತ್ತು ತಿದ್ದುಪಡಿ ನಿಯಮಗಳು ೨೦೧೧, ೨೦೧೫ ಮತ್ತು ೨೦೧೬ರ ಅನ್ವಯ ೨೦೨೩ರ ಮಾರ್ಚ್ ೯ರಂದು ಸಿವಿಲ್ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿತ್ತು. ೨೦೨೩ರ ನವೆಂಬರ್‌ನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ೩೦.೦೧.೨೦೨೪ ರಿಂದ ೦೧.೦೨.೨೦೨೪ರ ವರೆಗೆ ನಡೆದ ವೈವಾದಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ ಮೇಲೆ ೩೩ ಮಂದಿ ಅಭ್ಯರ್ಥಿಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ ಕಾರ್ಯದರ್ಶಿಯೂ ಆದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ ಎಸ್ ಭರತ್ ಕುಮಾರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
೨೫ನೇ ವರ್ಷಕ್ಕೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿರುವ ಅನಿಲ್ ಅವರು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರು ಎನ್ನಲಾಗಿದೆ.