ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಳ್ಳಲು ಕಡೇ ಕ್ಷಣದವರೆಗೂ ಹೋರಾಡುತ್ತೇನೆ. ಈಗ ಹರಿದಾಡುತ್ತಿರುವ ಅಂತೆಕಂತೆಗಳು ಅಂತಿಮವಲ್ಲ ನಾನು ಸ್ಪರ್ಧಿಸುವುದು ಖಚಿತ ಎಂದು ಸಂಸದೆ ಸುಮಲತಾ ಹೇಳಿದರು.
ಮಂಡ್ಯದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಲು ಸಾಕಷ್ಟು ಹೋರಾಟ ಮಾಡಿದ್ದೇನೆ. ಟಿಕೆಟ್ ಅಂತಿಮವಾಗುವವರೆಗೂ ಕಾದು ನೋಡುತ್ತೇನೆ. ನಂತರವಷ್ಟೇ ಆ ಬಗ್ಗೆ ಮಾತನಾಡುತ್ತೇನೆ. ಕ್ಷೇತ್ರವು ಬಿಜೆಪಿಗೇ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ. ನನಗಾಗಿ ಟಿಕೆಟ್ ಕೇಳುತ್ತಿಲ್ಲ, ನನ್ನ ಮಂಡ್ಯ ಜನರಿಗಾಗಿ ಹೋರಾಡುತ್ತಿದ್ದೇನೆ ಎಂದರು. ನಾನು ಟಿಕೆಟ್ ಪಡೆಯಲೇಬೇಕು ಎಂಬ ಉದ್ದೇಶವಿದ್ದರೆ ಎಲ್ಲಾದರೂ ಅವಕಾಶ ಸಿಗುತ್ತಿತ್ತು. ಆದರೆ ಮಂಡ್ಯ ಜನರು ನನಗೆ ಮುಖ್ಯ. ಜೆಡಿಎಸ್‌ನವರು ಏನಾದರೂ ಹೇಳಿಕೊಳ್ಳಲಿ, ಟಿಕೆಟ್ ಅಧಿಕೃತವಾಗುವವರೆಗೂ ಕಾಯುತ್ತೇನೆ, ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಪ್ರಾಣ ಬೆದರಿಕೆ ಇತ್ತು: ಸುಮಲತಾ ಅವರು ತಮ್ಮ ಅಧಿಕಾರದ ಅವಧಿಯ ಕಡೆಯ ಜಿಲ್ಲಾ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯನ್ನು ಶುಕ್ರವಾರ ನಡೆಸಿದರು. ಅವರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, `ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುವಾಗ ನನಗೆ ಜೀವ ಬೆದರಿಕೆ ಇತ್ತು. ಹೋರಾಟ ನಿಲ್ಲಿಸುವಂತೆ ಕೆಲವರು ಬೆದರಿಕೆ ಹಾಕಿದ್ದರು. ಕೆಆರ್‌ಎಸ್ ಜಲಾಶಯ ಉಳಿವಿಗೆ ಹೋರಾಟ ನಡೆಸಿದ್ದೇನೆ. ನಮ್ಮ ಹೋರಾಟದ ಫಲವಾಗಿ ಹೈಕೋರ್ಟ್ ಜಲಾಶಯದ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿದೆ ಎಂದರು.
ಗಣಿಗಾರಿಕೆ ನಿಷೇಧವಿದ್ದರೂ ಬೇಬಿಬೆಟ್ಟ ಅರಣ್ಯ ಪ್ರದೇಶದಲ್ಲಿ ಪರೀಕ್ಷಾರ್ಥ ಸ್ಫೋಟ ನಡೆಸಲು ಹೊರಟಿರುವುದು ಖಂಡನೀಯ. ಅಲ್ಲಿ ಸ್ಫೋಟಕ್ಕೆ ಅವಕಾಶ ನೀಡಬಾರದು. ಗಣಿ ಮಾಲೀಕರು ಕೋಟ್ಯಂತರ ರೂಪಾಯಿ ರಾಜಧನ ಬಾಕಿ ಉಳಿಸಿಕೊಂಡಿದ್ದಾರೆ. ಗಣಿ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಬರಬೇಕಾದ ರಾಜಧನ ವಸೂಲಿ ಮಾಡಬೇಕು ಎಂದು ಸೂಚಿಸಿದರು.