ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿರುವುದರಿಂದ ಕೂಡಲೇ ವಾಣಿಜ್ಯ ಮಳಿಗೆ ಹರಾಜು ರದ್ದುಪಡಿಸಿ, ತಪ್ಪಿದಲ್ಲಿ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ
ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪಟ್ಟಣದ ಪುರಸಭೆಗೆ ಸೇರಿದ 72 ವಾಣಿಜ್ಯ ಮಳಿಗೆ ಹರಾಜಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದು, ಈ ಬಗ್ಗೆ ಆಡಳಿತಾಧಿಕಾರಿಗಳಾದ ಉಪ- ವಿಭಾಗಾದಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಮುಬೀನಾ ಭಾನು ಒತ್ತಾಯಿಸಿದ್ದಾರೆ.
ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯನ್ನು ಜನರ ಕಣ್ಣಿಗೆ ಮಣ್ಣೆರಚುವಂತೆ ಮಾಡುತ್ತಿದ್ದು, ಒಳಗೊಳಗೆ ಹಾಲಿ ಇರುವ ಬಾಡಿಗೆದಾರರಿಗೆ ನೀಡಲು ಹುನ್ನಾರ ಮಾಡುತ್ತಿರುವ ಈ ವಿಚಾರ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದ್ದು ಈ ಪ್ರಶ್ನೆಗೆ ಪುರಸಭೆಯ ಮುಖ್ಯಾಧಿಕಾರಿಗಳು ಉತ್ತರ ನೀಡಬೇಕೆಂದು ಆಗ್ರಹಿಸಿದ್ದಾರೆ. ಸರ್ಕಾರದ ನಿಯಮಾನುಸಾರ ವಾಣಿಜ್ಯ ಮಳಿಗೆಗಳನ್ನು ಹರಾಜು ಮಾಡಬೇಕಾದರೆ ಈವರೆಗೆ ಬಾಡಿಗೆಗೆ ಇದ್ದವರನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿ ಆನಂತರ ಹರಾಜು ಪ್ರಕ್ರಿಯೆ ನಡೆಸಬೇಕು ಆದರೆ ಪುರಸಭೆಯವರು ಈ ಹಿಂದೆ ಬಾಡಿಗೆಗೆ ಇದ್ದ ವರ್ತಕರ ಸಾಮಾನು ಮತ್ತು ಸರಂಜಾಮು ಮಳಿಗೆಗಳ ಒಳಗಡೆ ಇದ್ದರು ಹರಾಜು ಮಾಡುವ ನಾಟಕವಾಡುತ್ತಿದ್ದಾರೆಂದು ತಿಳಿಸಿದ್ದಾರೆ.
ಈ ಹಿಂದೆ ಇದ್ದ ವರ್ತಕರನ್ನೇ ಕರೆಯಿಸಿ ಗುಟ್ಟಾಗಿ ಟೆಂಡರ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದರ ಜೊತೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಹೋದವರಿಗೆ ಬೆದರಿಕೆಯ ರೂಪದ ಎಚ್ಚರಿಕೆ ಕೊಡುವುದರೊಂದಿಗೆ ಸರ್ವರ್ ನೆಪ ಹೇಳುತ್ತಿದ್ದು ಇದು ಒಂದು ರೀತಿ ಸರ್ವಾಧಿಕಾರಿ ಧೋರಣೆ ಎಂದವರು ಪ್ರತಿಕ್ರಿಯಿಸಿದ್ದಾರೆ. ಹರಾಜು ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡದೆ ಇರುವುದರ ಜತೆಗೆ ವಾಣಿಜ್ಯ ಮುಳಿಗೆಗಳಲ್ಲಿ ಉಧ್ಯಮಸ್ಥ ಮಹಿಳೆಯರಿಗೆ ಮೀಸಲು ನೀಡದೆ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದು ಈ ಬಗ್ಗೆ ಸಂಬಂಧಿತ ಮೇಲಾಧಿಕಾರಿಗಳು ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ.
ಪುರಸಭೆಯ ಆಡಳಿತ ಮಂಡಳಿಯ ಕೆಲವು ಸದಸ್ಯರು ಈ ವಿಚಾರದಲ್ಲಿ ಹಸ್ತಕ್ಷೇಪ ನಡೆಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದು ಈ ಹಿಂದೆ 72 ಮಳಿಗೆಗಳನ್ನು ಬಾಡಿಗೆಗೆ ಪಡೆದಿದ್ದ ಕೆಲವು ವರ್ತಕರು ಸಂಪೂರ್ಣ ಬಾಡಿಗೆ ಪಾವತಿ ಮಾಡದಿದ್ದರೂ ಅವರುಗಳು ಮತ್ತೆ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅವಕಾಶ ನೀಡುತ್ತಿದ್ದು ಈ ಕಾನೂನುಬಾಹಿರ ಪ್ರಕ್ರಿಯೆಯನ್ನು ಸರ್ಕಾರ ತಡೆಗಟ್ಟಬೇಕೆಂದು ಕೋರಿದ್ದಾರೆ.
ಸರ್ಕಾರದ ಆದೇಶದಂತೆ ಹರಾಜು ಪ್ರಕ್ರಿಯೆ ನಡೆಯದೆ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿರುವುದರಿಂದ ಈ ಕೂಡಲೇ ವಾಣಿಜ್ಯ ಮಳಿಗೆ ಹರಾಜು ರದ್ದುಪಡಿಸಬೇಕೆಂದು ತಪ್ಪಿದಲ್ಲಿ ತಾವು ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.