ಧಾರವಾಡ : ಮಾರ್ಚ್ 1 ರಿಂದ 22 ರವರೆಗೆ ನಡೆಯುವ ದ್ವಿತೀಯ ಪಿ.ಯು.ಸಿ ಪರೀಕ್ಷೆಗೆ ಜಿಲ್ಲೆಯಾದ್ಯದಂತ ಒಟ್ಟು 43 ಪರೀಕ್ಷಾ ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರು ಹಾಗೂ ಕಾಲೇಜಿನ ಪ್ರಾಂಶುಪಾಲರು ನಿಗಾವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.
ಅವರು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಗಂಣದಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ಸೇರಿದಂತೆ ಒಟ್ಟು 26,411 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಧಾರವಾಡ. ಹುಬ್ಬಳ್ಳಿ. ಕಲಘಟಗಿ. ಕುಂದಗೋಳ. ನವಲಗುಂದ ಸೇರಿದಂತೆ 12,704 ಗಂಡು ಮಕ್ಕಳು, 12,707 ಹೆಣ್ಣು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಕೇಂದ್ರಗಳಲ್ಲಿ ಯಾವುದೆ ಲೊಪವಾಗದಂತೆ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದರು.
ಜಿಲ್ಲೆಯ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ವಿತರಣೆ ಮಾಡಲು ವಿವಿಧ ತಾಲ್ಲೂಕಿನಲ್ಲಿ 16 ಮಾರ್ಗಗಳನ್ನು ಗುರುತಿಸಲಾಗಿದೆ. ಒಂದು ತಂಡಕ್ಕೆ 03 ಜನ ಸದಸ್ಯರನ್ನು ನೇಮಿಸಲಾಗಿದೆ. ಮಾರ್ಗಾಧಿಕಾರಿಗಳ ತಂಡದ 1ನೇ ಅಧಿಕಾರಿ ಅವರ ಸರಕಾರಿ ವಾಹನಕ್ಕೆ ಉಪನಿರ್ದೇಶಕರು ಇರುವರು. ಪದವಿ ಪೂರ್ವ ಶಿಕ್ಷಣ ಇಲಾಖೆ ಧಾರವಾಡ ಇವರ ಕಛೇರಿ ವತಿಯಿಂದ ಪರೀಕ್ಷೆ ಪ್ರಾರಂಭವಾಗುವ 3 ದಿನ ಮುಂಚಿತವಾಗಿ ಜಿಪಿಎಸ್‍ನ್ನು ಅಳವಡಿಸಲಾಗುವುದು. ಜಿಲ್ಲಾ ತ್ರಿಸದಸ್ಯ ಸಮಿತಿ ವತಿಯಿಂದ ಮಾರ್ಗಾಧಿಕಾರಿಗಳು ಧಾರವಾಡ ಶಹರದ ಹಾಗೂ ಗ್ರಾಮೀಣ ಪ್ರದೇಶದ ಪರೀಕ್ಷಾ ಕೇಂದ್ರಗಳನ್ನು ಹೊರತುಪಡಿಸಿ, ತಾಲ್ಲುಕಿನ ಮಾರ್ಗಾಧಿಕಾರಿಗಳು 2:30 ಗಂಟೆಗೆ ಪರೀಕ್ಷೆ ಪ್ರಾರಂಭದ ಮುಂಚಿತವಾಗಿ ಹಾಜರಿರಬೇಕು, ಉಳಿದ ಮಾರ್ಗಾಧಿಕಾರಿಗಳು 2 ಗಂಟೆ ಮುಂಚಿತವಾಗಿ ಜಿಲ್ಲಾ ಖಜಾನೆಗೆ ಹಾಜರಿದ್ದು, ಪರೀಕ್ಷಾ ಸಾಮಗ್ರಿಗಳನ್ನು ಸ್ವೀಕರಿಸಿ ಸೂಕ್ತ ಸಿಬ್ಬಂದಿ ತಂಡದ ಸದಸ್ಯರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧಿಕ್ಷಕರು ಮತ್ತು ಪ್ರಶ್ನೆ ಪತ್ರಿಕೆ ಪಾಲಕರಿಗೆ ನೀಡಿ ಸ್ವೀಕೃತಿ ಪಡೆಯಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು.
ಪ್ರತಿ ಪರೀಕ್ಷಾ ಕೇಂದ್ರಕ್ಕೆ ಸರಕಾರಿ ಮತ್ತು ಅನುದಾನಿತ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರನ್ನು ಪ್ರಶ್ನೆ ಪತ್ರಿಕೆ ಪಾಲಕರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲೆಯ ಡಿ.ಡಿ.ಪಿ.ಯು ಸುರೇಶ ಕೆ. ಅವರು ಸಭೆಯನ್ನು ನಿರೂಪಿಸಿ, ಮಾತನಾಡಿದರು. ಸಭೆಯಲ್ಲಿ ಧಾರವಾಡ ಜಿಲ್ಲೆಯ ವಿವಿಧ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಖಾಸಗಿ ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಜಿಲ್ಲಾ ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.