Saturday, April 19, 2025
Google search engine

Homeರಾಜ್ಯಕನಕಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ

ಕನಕಪುರ: ಕಾಡಾನೆ ದಾಳಿಗೆ ಮಹಿಳೆ ಬಲಿ

ಕನಕಪುರ: ತಾಲ್ಲೂಕಿನ ಸಾತನೂರು ಹೋಬಳಿ ಅಚ್ಚಲು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನಪ್ಪಿ ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದು ಘಟನೆ ನಡೆದಿದೆ.

 ಅಚ್ಚಲು ಇಂದಿರಾನಗರದ ಷಣ್ಮುಖಯ್ಯ ಅವರ ಪತ್ನಿ ಜಯಮ್ಮ(55) ಮೃತಪಟ್ಟ ಮಹಿಳೆಯಾಗಿದ್ದಾರೆ. ಇವರು ತಮ್ಮ ಸಹೋದರಿ ವೆಂಕಟಲಕ್ಷ್ಮಮ್ಮ(50) ಅವರ ಜೊತೆ ಜಮೀನಿನ ಕಡೆ ಹೋಗುತ್ತಿದ್ದಾಗ  ಎರಡು ಆನೆಗಳು ದಾಳಿ ನಡೆಸಿವೆ.

 ದಾಳಿ ವೇಳೆಯಲ್ಲಿ ಜಯಮ್ಮನನ್ನು ಸೊಂಡಲಿನಿಂದ ಎತ್ತಿ ಬಿಸಾಡಿ, ಕಾಲಿನಲ್ಲಿ ತುಳಿದು ಸಾಯಿಸಿವೆ. ವೆಂಕಟಲಕ್ಷ್ಮಮ್ಮ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹಾರೋಹಳ್ಳಿ ಹತ್ತಿರದ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

 ಸೋಮವಾರ ಬೆಳಿಗ್ಗೆ ಎರಡು ಆನೆಗಳು ಬೊಮ್ಮನಹಳ್ಳಿ ಗ್ರಾಮದಿಂದ ಅಚ್ಚಲು ಬೆಟ್ಟಕ್ಕೆ ಹೋಗುತ್ತಿದ್ದವು, ಈ ವೇಳೆ ಜಯಮ್ಮ ಮತ್ತು ವೆಂಕಟ ಲಕ್ಷ್ಮಮ್ಮ ಜಮೀನಿನ ಕಡೆ ಕೆಲಸಕ್ಕೆಂದು ಹೋಗುತ್ತಿದ್ದಾಗ ಅಚ್ಚಲು ಬಳಿಯ ಪೋಸ್ಟ್‌ ಮರೀಗೌಡರ ಮನೆಯ ಪಕ್ಕದ ಪೈಪ್ ಲೈನ್‌ನಲ್ಲಿ ಆನೆಗಳು ದಾಳಿ ನಡೆಸಿವೆ.

 ಮಹಿಳೆಯರು ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದ ಜನರು ಅವರ ನೆರವಿಗೆ ಓಡಿ ಹೋಗಿದ್ದಾರೆ, ಜನರು ಜೋರಾಗಿ ಗುಂಪಾಗಿ ಬರುತ್ತಿದ್ದಂತೆ ಆನೆಗಳು ಕಾಡಿನ ಕಡೆಗೆ ಓಡಿವೆ.

 ಆನೆಗಳು ತೀವ್ರವಾಗಿ ದಾಳಿ ನಡೆಸಿದ್ದರಿಂದ ಜಯಮ್ಮ ಸಾವನಪ್ಪಿದ್ದು, ವೆಂಕಟಲಕ್ಷ್ಮಮ್ಮನನ್ನು ಆಸ್ಪತ್ರೆಗೆ ಕಳಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸಾವಿರಾರು ಮಂದಿ ಘಟನಾ ಸ್ಥಳಕ್ಕೆ ಬಂದು ಜಮಾಯಿಸಿ, ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಈ ವೇಳೆ ಸ್ಥಳದಲ್ಲಿದ್ದ ರೈತರು ಅರಣ್ಯ ಅಧಿಕಾರಿಗಳ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿ ಈ ಭಾಗದಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿ ಒಂದು ತಿಂಗಳ ಅಂತರದಲ್ಲಿ ಮೂವರು ಮಂದಿಯನ್ನು ಬಲಿ ತೆಗೆದುಕೊಂಡಿವೆ. ಆದರೂ ಅರಣ್ಯ ಇಲಾಖೆ ಮತ್ತು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲವೆಂದು ಕಿಡಿಕಾರಿದರು.

 ಪರಿಹಾರ ಕೊಡುವುದರಿಂದ ಪರಿಹಾರ ಆಗುವುದಿಲ್ಲ, ಕಾಡಾನೆಗಳ ತಡೆಗೆ ಸರ್ಕಾರ ಮತ್ತು ಇಲಾಖೆ ಚಿಂತನೆ ನಡೆಸಿ ಶಾಶ್ವತವಾಗಿ ಕಾಡಾನೆಗಳು ಹೊರಬರದಂತೆ ತಡೆಗಟ್ಟಬೇಕು ಎಂದು ಒತ್ತಾಯಿಸಿದರು.

 ಅರಣ್ಯ ಇಲಾಖೆ ಎಸಿಎಫ್‌ ಗಣೇಶ್‌, ಆರ್‌ಎಫ್‌ಒ ಗಳಾದ ದಾಳೇಶ್, ಆಶಾ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರನ್ನು ಸಮಧಾನ ಪಡಿಸಿದ್ದಾರೆ. ಆನೆದಾಳಿಯಿಂದ ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಸರ್ಕಾರದಿಂದ ಶೀಘ್ರ ಪರಿಹಾರ ದೊರಕಿಸಿಕೊಡುವುದಾಗಿ ತಿಳಿಸಿ ಅಂತ್ಯ ಸಂಸ್ಕಾರಕ್ಕೆ 10 ಸಾವಿರ ನೀಡಿದ್ದಾರೆ.

 ಜಯಮ್ಮರ ಮೃತದೇಹವನ್ನು ಕನಕಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದ್ದಾರೆ, ಮೃತರ ಅಂತ್ಯ ಸಂಸ್ಕಾರವು ಅಚ್ಚಲು ಗ್ರಾಮದಲ್ಲಿ ಸೋಮವಾರ ಸಂಜೆ ನೆರವೇರಿತು, ತೀವ್ರವಾಗಿ ಗಾಯಗೊಂಡಿದ್ದ ವೆಂಕಟಲಕ್ಷ್ಮಮ್ಮ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಚ್ವರಿಕೆ:  ಕನಕಪುರ ತಾಲ್ಲೂಕಿನಲ್ಲಿ ಕಾಡಾನೆ ದಾಳಿಯಿಂದ ರೈತರು ಕಂಗೆಟ್ಟಿದ್ದು ದಾಳಿಯಲ್ಲಿ ರೈತರು ಸಾವನಪ್ಪುತ್ತಿದ್ದಾರೆ, ಇದರಿಂದ ರೈತರ ಆಕ್ರೋಶದ ಕಟ್ಟೆ ಒಡೆದಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ  ತಿರುಗಿ ಬೀಳುವ ಮುನ್ನ ನೀವು ಎಚ್ಚೆತ್ತುಕೊಳ್ಳಿ ಎಂದು ವಿಧಾನಪರಿಷತ್‌ ಸದಸ್ಯ ಎಸ್‌.ರವಿ ಎಚ್ಚರಿಕೆ ನೀಡಿದರು.

 ಪ್ರತಿಬಾರಿ ಆನೆ ದಾಳಿಯಿಂದ ರೈತರು ಸತ್ತಾಗ ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳುವುದರ ಬದಲು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳಿ. ರೈತರ ಸಹನೆಗೂ ಒಂದು ಮಿತಿಯಿದೆ, ಸಹನೆಯ ಕಟ್ಟೆ ಒಡೆಯದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

 ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿ ಸರ್ಕಾರದಿಂದ ಪರಿಹಾರದ ಜೊತೆಗೆ ಕುಟುಂಬಕ್ಕೆ ಸಿಗುವ ಎಲ್ಲಾ ಸವಲತ್ತುಗಳನ್ನು ಶೀಘ್ರವಾಗಿ ಕೊಡಿಸಿಕೊಡುವುದಾಗಿ ತಿಳಿಸಿದರು. ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ, ದಿಶಾ ಕಮಿಟಿ ಸದಸ್ಯ ಏಳಗಳ್ಳಿ ರವಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular