ಚಾಮರಾಜನಗರ: ಚಂದ್ರಶೇಖರ್ ಆಜಾದ್ ಅಮರ ರಾಷ್ಟ್ರ ಪ್ರೇಮಿ. ಬ್ರಿಟಿಷರಿಗೆ ಎಂದು ಜೀವಂತವಾಗಿ ಸಿಗಲಾರೆ ಎಂಬ ಪ್ರತಿಜ್ಞೆಯಂತೆ ತನ್ನ ಬಂದೂಕಿನಿಂದ ತಾವೇ ಕೊನೆಯ ಗುಂಡನ್ನು ಹಾರಿಸಿಕೊಂಡು ಭಾರತಾಂಬೆಗೆ ಅರ್ಪಣೆ ಮಾಡಿಕೊಂಡ ಮಹಾನ್ ತ್ಯಾಗಿ ಎಂದು ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಚಂದ್ರಶೇಖರ್ ಆಜಾದ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜಲಿಯನ್ ವಾಲಾಬಾಗ್ ದುರಂತದಿಂದ ನೊಂದ ಚಂದ್ರಶೇಖರ್ ಬಾಲ್ಯದಿಂದಲೂ ಅಪ್ಪಟ ದೇಶ ಪ್ರೇಮಿ. ಬ್ರಿಟಿಷರನ್ನು ಯಾವುದೇ ಮಾರ್ಗದಿಂದಲಾದರೂ ಭಾರತದಿಂದ ಓಡಿಸಬೇಕೆಂಬ ದೃಢಸಂಕಲ್ಪದಿಂದ ಕ್ರಾಂತಿಕಾರಿಯಾಗಿ ,ಮೊಟ್ಟಮೊದಲು ಬ್ರಿಟಿಷರ ವಿರುದ್ಧ ಶಸ್ತ್ರಾಸ್ತ್ರ ಹಿಡಿದ ಕ್ರಾಂತಿಕಾರಿ ಎಂದರು.

ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಬಿ ಕೆ ಆರಾಧ್ಯ ಉದ್ಘಾಟಿಸಿದರು. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಚಂದ್ರಶೇಖರ್ ಆಜಾದ್ ಭಾರತಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದರು ಎಂದರು.
ಶ್ರೀಗಂಧ ಕನ್ನಡ ಯುವಕ ಸಂಘದ ರವಿಚಂದ್ರ ಪ್ರಸಾದ್, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ಗುರುಲಿಂಗಮ್ಮ, ಜೈಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ, ಋಗ್ವೇದಿ ಯೂತ್ ಕ್ಲಬ್ ಶ್ರಾವ್ಯ ಎಸ್ ಋಗ್ವೇದಿ ಇದ್ದರು.